ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತುವೆಯಲ್ಲಿ ಬಿರುಕು ಕಂಡುಬಂದಿದೆ ಎಂಬುದನ್ನು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ( MMRDA) ಅಲ್ಲಗೆಳೆದಿದೆ. ಪ್ರಯಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ಹೇಳಿದೆ.
ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಅಟಲ್ ಸೇತು ಸಂಪರ್ಕಿಸುವ ಮಾರ್ಗದಲ್ಲಿ ಸಣ್ಣ ಬಿರುಕುಗಳು ಕಂಡುಬಂದಿವೆ ಮತ್ತು ಪಾದಚಾರಿ ಮಾರ್ಗವು ಮುಖ್ಯ ಸೇತುವೆಯ ಭಾಗವಾಗಿಲ್ಲ ಎಂದು ಹೇಳಿದೆ.
ಅಟಲ್ ಸೇತು ಸೇತುವೆಯ ಮುಖ್ಯ ಭಾಗದಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಗಮನಕ್ಕೆ ಬಂದಿದೆ. ಆದರೆ ವದಂತಿಗಳು ಹರಡುತ್ತಿವೆ. ದಯವಿಟ್ಟು ವದಂತಿಗಳನ್ನು ನಂಬಬೇಡಿ. ಅಟಲ್ ಸೇತುಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಣ್ಣಪುಟ್ಟ ಬಿರುಕುಗಳು ಕಂಡುಬಂದಿವೆ. ಹೇಳಲಾದ ಕಾಲುದಾರಿ ಮುಖ್ಯ ಸೇತುವೆಯ ಭಾಗವಾಗಿರದೆ ಸೇತುವೆಯನ್ನು ಸಂಪರ್ಕಿಸುವ ಸರ್ವಿಸ್ ರಸ್ತೆಯಾಗಿದೆ. ಯೋಜನೆಯಲ್ಲಿನ ರಚನಾತ್ಮಕ ದೋಷಗಳಿಂದಾಗಿ ಬಿರುಕುಗಳು ಉಂಟಾಗಿಲ್ಲ ಮತ್ತು ಸೇತುವೆಯ ರಚನೆಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎಂಬುದನ್ನು ಗಮನಿಸುವುದು ಬಹಳ ಮುಖ್ಯ ಎಂದು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.
ಐದು ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ದೇಶದ ಅತಿ ಉದ್ದದ ಸೇತುವೆಯ ಬಿರುಕುಗಳ ಬಗ್ಗೆ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದೆ.
ಸಂಚಾರಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಗಲ್ಫ್‌ರೋಝ್ ಮುಜಾವರ್, ನಾವು ರಸ್ತೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದೇವೆ ಎಂದು ತಿಳಿಸಿದ್ದು ವರದಿಯಾಗಿತ್ತು.
ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ನಾನಾ ಪಟೋಲೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಂಗಳುಗಳ ಹಿಂದೆಯಷ್ಟೇ ಉದ್ಘಾಟಿಸಿದ್ದ ಅಟಲ್ ಸೇತುವೆಯ ರಸ್ತೆ ಬಿರುಕು ಬಿಟ್ಟಿರುವುದು ಅತ್ಯಂತ ಕಳವಳಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯ ಬಿರುಕುಗಳು ಪ್ರಯಾಣಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿವೆ. ಈ ವಿಷಯವು ತುಂಬಾ ಗಂಭೀರವಾಗಿದೆ. ಮಾನ್ಯ ಹೈಕೋರ್ಟ್ ಈ ಬಗ್ಗೆ ತಕ್ಷಣ ಗಮನಹರಿಸಿ ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದರು.