ಮನೆ ಬಾಗಿಲಿಗೆ ಸೇವೆ – ಜನಸೇವಕರ ಹೆಸರಿನಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ನೇಮಿಸುವ ಹುನ್ನಾರ: ಸಿಪಿಐಎಂ ಆರೋಪ

Prasthutha|

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಟ್ರೈಬಲ್ ಉಪ ಯೋಜನೆ ಅಡಿ ಬಳಕೆಯಾಗದೆ ಉಳಿದಿದ್ದ ಹಣದಲ್ಲಿ ಪರಿಶಿಷ್ಟ ಜನರಿಗೆ ವಸತಿ ನಿವೇಶನ ನೀಡಲು 2014 ಜುಲೈನಲ್ಲಿ ರಾಜ್ಯ ಸರ್ಕಾರದ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾಡಲಾಗಿದ್ದ ತೀರ್ಮಾನವನ್ನು ಜಾರಿ ಮಾಡಲು ಬಿಡದ ಬಿಜೆಪಿ ಸಚಿವರು ಹಾಗೂ ಶಾಸಕರ ಕ್ರಮಗಳನ್ನು ಸಿಪಿಐ(ಎಂ) ಪಕ್ಷ ಖಂಡಿಸಿದೆ.

- Advertisement -


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.ಪ್ರತಾಪ್‌ ಸಿಂಹ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್, ಕೂಡಲೇ ಫಲಾನುಭವಿಗಳಿಗೆ ವಸತಿ ನಿವೇಶನಗಳನ್ನು ವಿತರಿಸಲು ಆಗ್ರಹಿಸಿದ್ದಾರೆ.


ವಸತಿ ಸಚಿವರು ಮತ್ತು ಬಿಡಿಎ ಅಧ್ಯಕ್ಷರ ಒತ್ತಡಕ್ಕೆ ಮಣಿದು ಅಂದಿನ ಮುಖ್ಯಮಂತ್ರಿ 2019 ಆಗಸ್ಟ್ ನಲ್ಲಿ ಈ ಪ್ರಕ್ರಿಯೆಯನ್ನು ರದ್ದುಮಾಡಲು ನೀಡಿದ್ದ ಸೂಚನೆಯಂತೆ 1,100 ಪರಿಶಿಷ್ಟ ವರ್ಗ ಮತ್ತು ಪಂಗಡದ ಫಲಾನುಭವಿಗಳಿಗೆ ಲಭಿಸಬೇಕಿದ್ದ ವಸತಿ ನಿವೇಶನಗಳು ದಶಕ ಕಳೆಯುತ್ತಿದ್ದರೂ ಲಭಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

- Advertisement -


ದಾಸನಪುರ ಹಾಗೂ ಕೆಂಗೇರಿ ಹೋಬಳಿಯಲ್ಲಿ ಗುರುತಿಸಿ ಬಿಬಿಎಂಪಿಗೆ ನೀಡಲಾಗಿದ್ದ ಜಮೀನಿನಲ್ಲಿ ಕೈಗೊಳ್ಳಬೇಕಾಗಿದ್ದ ಪರಿಶಿಷ್ಟರ ಈ ವಸತಿ ನಿವೇಶನ ಯೋಜನೆ ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಯಿಂದಾಗಿ ರದ್ದಾಗಬೇಕಾಗಿ ಬಂದಿದೆ. ಇದರಿಂದಾಗಿ 1,100 ಫಲಾನುಭವಿಗಳು ವಸತಿ ನಿವೇಶನದಿಂದ ವಂಚಿತರಾಗಬೇಕಾಗಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆ ಮತ್ತು ಟ್ರೈಬಲ್ ಉಪ ಯೋಜನೆಗಳ ಹಣ ಪರಿಶಿಷ್ಟರಿಗೆ ಮಾತ್ರ ಬಳಕೆಯಾಗಬೇಕು. ಬಿಬಿಎಂಪಿಯ ಅಸಮರ್ಥ ಆಡಳಿತದಿಂದಾಗಿ ಈ ಯೋಜನೆಗೆ ಮೀಸಲಿಟ್ಟಿದ್ದ ಹಣ ಬಳಕೆಯಾಗದೆ ಉಳಿದಿದ್ದು ಈ ಹಣವನ್ನು ವಸತಿ ನಿವೇಶನ ರಹಿತರಿಗೆ ವಸತಿ ನಿವೇಶನ ನೀಡಲು ಬಳಸಬೇಕೆಂಬ 2021ರ ಅಂದಿನ ಸರ್ಕಾರದ ಕ್ರಮಕ್ಕೆ ಬಿಜೆಪಿ ಸರ್ಕಾರವು ಅಡ್ಡಿಪಡಿಸಿರುವುದು ಬಿಜೆಪಿಯ ದಲಿತ ದ್ರೋಹಿ ಕ್ರಮವನ್ನು ತೋರುತ್ತದೆ ಎಂದು ಸಿಪಿಐ(ಎಂ) ಪಕ್ಷವು ಟೀಕಿಸಿದೆ.

ಮನೆ ಬಾಗಿಲಿಗೆ ಸೇವೆ – ಸರ್ಕಾರದ ಸೇವೆಗಳಿಗೆ ಬಳಕೆದಾರರ ಶುಲ್ಕ ಸಂಗ್ರಹಿಸುವ ನಯವಂಚಕ ಕ್ರಮ: ಸಿಪಿಐ(ಎಂ) ಖಂಡನೆ
ರಾಜ್ಯ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಇಲಾಖೆಗಳ 58 ಸರ್ಕಾರಿ ಸೇವೆಯನ್ನು ಮನೆಬಾಗಿಲಿಗೆ ಒದಗಿಸುವ ನೆಪದಲ್ಲಿ ಸೇವೆ ಪಡೆಯುವವರಿಂದ ಪ್ರತಿ ಸೇವೆಗೆ ರೂ.115 ಸೇವಾ ಶುಲ್ಕದೊಂದಿಗೆ ಇಲಾಖಾ ಶುಲ್ಕವನ್ನು ಸಂಗ್ರಹಿಸುವ ಮೂಲಕ ಸರ್ಕಾರಿ ಸೇವೆಗಳಿಗೆ ಬಳಕೆದಾರರ ಶುಲ್ಕ ವಿಧಿಸುವ ನಯವಂಚಕ ಕ್ರಮಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದರು.


ಮನೆ ಬಾಗಿಲಿಗೆ ಸೇವೆ ಒದಗಿಸಲು ನೇಮಕ ಮಾಡಲಾಗುವ ಜನ ಸೇವಕರು ಯಾರು? ಅವರನ್ನು ಹೇಗೆ ನೇಮಿಸಲಾಗುತ್ತದೆ? ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರವು ಬಹಿರಂಗಪಡಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಜನಸೇವಕರ ಹೆಸರಿನಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ನೇಮಿಸಿ ಅವರ ಮೂಲಕ ರಾಜ್ಯ ಸರ್ಕಾರಿ ಸೇವೆಗಳನ್ನು ಒದಗಿಸಿ ಅದರಿಂದಲೂ ಶುಲ್ಕ ಸಂಗ್ರಹಿಸಿ ಇದುವರೆಗೆ ಉಚಿತವಾಗಿ ಲಭ್ಯವಿದ್ದ ಸೇವೆಗಳಿಗೆ ಶುಲ್ಕ ವಿಧಿಸುವ ದೂರ್ತ ಕ್ರಮವನ್ನು ರಾಜ್ಯ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಮುಂದಾಗಿದೆ ಎಂದು ಅವರು ಖಂಡಿಸಿದ್ದಾರೆ.


ಇದು ಒಂದೆಡೆ ನವ ಉದಾರಿವಾದಿ ಆರ್ಥಿಕ ನೀತಿಗಳ ಅನುಸಾರವಾಗಿ ಉಚಿತ ಸೇವೆಗಳನ್ನೂ ಪಾವತಿಸಿ ಸೇವೆ ಪಡೆಯಿರಿ ಎಂದಾಗಿಸುವ ಕ್ರಮದೊಂದಿಗೆ ಇನ್ನೊಂದೆಡೆ ಸರ್ಕಾರಿ ಸೇವೆಗಳನ್ನು ಆರ್.ಎಸ್.ಎಸ್. ಕಾರ್ಯಕರ್ತರಿಗೆ ಹೊರಗುತ್ತಿಗೆ ನೀಡಿ, ಆ ಮೂಲಕ ತಮ್ಮ ಹಿಂದುತ್ವದ ಸಿದ್ಧಾಂತವನ್ನು ಸರ್ಕಾರಿ ಸೇವೆ ಮೂಲಕ ಪ್ರಚುರಪಡಿಸುವ ಬಿಜೆಪಿ ಸರ್ಕಾರದ ದುಷ್ಟ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ಇಲಾಖೆಗಳಲ್ಲಿ ಸಮರ್ಥ ಮತ್ತು ಸಮರ್ಪಕ ಸೇವೆ ಒದಗಿಸುವ ಕಾರ್ಯವನ್ನು ಖಾತ್ರಿಪಡಿಸಬೇಕಾದ ಮುಖ್ಯಮಂತ್ರಿಗಳು ಅದನ್ನು ಖಾತ್ರಿಪಡಿಸದೆ ಭ್ರಷ್ಟಾಚಾರಕ್ಕೆ ಅಲ್ಲಿ ಅವಕಾಶವಿದೆ ಎಂಬ ನೆಪ ಹೇಳಿ ಸದರಿ “ಮನೆಬಾಗಿಲಿಗೆ ಜನ ಸೇವಕ” ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಮುಖ್ಯಮಂತ್ರಿಗಳು ಮತ್ತು ರಾಜ್ಯ ಬಿಜೆಪಿ ಸರ್ಕಾರ ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪ್ರವೃತ್ತಿಯನ್ನು ತೋರುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp