ರಾಯ್ಪುರ್: ಅಪರಾಧಗಳನ್ನು ತಡೆಯಲೆಂದು ಸಿಸಿಟಿವಿ ಕ್ಯಾಮೆರಾಗಳನ್ನು ಸಾಮಾನ್ಯವಾಗಿ ಬೀದಿ ಬದಿಗಳಲ್ಲಿ ಅಳವಡಿಸಲಾಗುತ್ತದೆ. ಆದರೆ, ಅದೇ ಸಿಸಿಟಿವಿ ಕ್ಯಾಮೆರಾವನ್ನು ಹಸುವಿನ ಸಗಣಿಯ ರಕ್ಷಣೆಗಾಗಿ ಚತ್ತೀಸ್ ಗಢದ ಸರ್ಕಾರ ಬಳಸುತ್ತಿದೆ.
ಛತ್ತೀಸ್ಗಢದಲ್ಲಿ ಸಗಣಿಗೆ ಭಾರಿ ಬೇಡಿಕೆ ಇರುವುದರಿಂದ ಸರ್ಕಾರ ಕಳೆದ ವರ್ಷ ‘ಗೌಧನ್ ನ್ಯಾಯ ಯೋಜನೆ’ ಅನ್ನು ಜಾರಿ ಮಾಡಿದ್ದು, ಒಂದು ಕೆಜಿ ಸಗಣಿಯನ್ನು 1.5 ರೂ.ಗೆ ಸರ್ಕಾರ ಪಡೆದುಕೊಳ್ಳುತ್ತಿರುವುದರಿಂದ ಈ ರಾಜ್ಯದಲ್ಲಿ ಸಗಣಿಗೆ ಭಾರಿ ಬೇಡಿಕೆ ಇದೆ.
ಸರ್ಕಾರದ ಈ ಯೋಜನೆಯಿಂದ ಸಗಣಿ ಕಳ್ಳತನ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ. ಇಲ್ಲಿ ರಾತ್ರೋರಾತ್ರಿ ಸಗಣಿಯ ರಾಶಿಗಳು ಕಳವಾಗುತ್ತಿವೆ. ಇದೀಗ ಸಗಣಿ ಕಳ್ಳರು ಛತ್ತೀಸ್ಗಢದಲ್ಲಿ ಸಾಮಾನ್ಯವಾಗಿಬಿಟ್ಟಿದ್ದಾರೆ.
ಅಂಬಿಕಾಪುರ ಪುರಸಭೆಯ ಸ್ಥಳೀಯ ಸರ್ಕಾರಿ ಗೌ-ಧನ್ ಕೇಂದ್ರದಲ್ಲಿ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಈ ಕೇಂದ್ರದಿಂದ ಸಗಣಿಯನ್ನು ಕದಿಯಲಾಗುತ್ತಿದೆ.
ಇತ್ತೀಚೆಗೆ ಸಗಣಿ ಕದಿಯುತ್ತಿದ್ದ ಐವರು ಮಹಿಳೆಯರನ್ನು ಬಂಧಿಸಿ ಅವರಿಂದ ಬರೋಬ್ಬರಿ 45 ಕೆಜಿ ಸಗಣಿಯನ್ನು ವಶಕ್ಕೆ ಪಡೆಯಲಾಗಿತ್ತು. ನಿರಂತರವಾಗಿ ನಡೆಯುತ್ತಿರುವ ಕಳ್ಳತನದಿಂದಾಗಿ ಅಧಿಕಾರಿಗಳಿಗೆ ತಲೆ ನೋವಾಗಿದೆ. ಹೀಗಾಗಿ ಸಗಣಿ ಕಳ್ಳತನಕ್ಕೆ ಬ್ರೇಕ್ ಹಾಕಲೇಬೇಕೆಂದು ಹಠದಲ್ಲಿರುವ ಅಧಿಕಾರಿಗಳು ಗೌ-ಧನ್ ಕೇಂದ್ರದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ. ಗೌ-ಧನ್ ಕೇಂದ್ರದ ಸುತ್ತ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲು ಯೋಜನೆ ರೂಪಿಸಿದ್ದಾರೆ.