ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕಳೆದ ವಾರ ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ, 25 ವರ್ಷದ ಯುವತಿ ಇಂದು (ಬುಧವಾರ) ಸಂಜೆ ಮೃತಪಟ್ಟಿದ್ದಾರೆ. ತೀವ್ರ ಶಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಯ ಆರೋಗ್ಯ ಕ್ಷೀಣಿಸಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಕಲಬುರಗಿ ನಗರದ ನಿವಾಸಿಯಾಗಿದ್ದ ಮಹಿಳೆ ಜೂನ್ 6ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಮರುದಿನವೇ ಅಂದರೆ ಜೂ.7-8ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈಕೆಯ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು, ಖಾಸಗಿ ಆಂಬ್ಯುಲೆನ್ಸ್ ಚಾಲಕ, ಇಲ್ಲಿನ ಫಿಲ್ಟರ್ ಬೆಡ್ ನಿವಾಸಿ ಪಿಂಟು ಎಂಬ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಮಹಿಳೆ ಎಚ್ಚರಗೊಂಡು ಚೀರಿಕೊಂಡಾಗ ಆರೋಪಿ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಈಗಾಗಲೇ ಆರೋಪಿಯನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ಕೋವಿಡ್ ಸೋಂಕಿನ ಕಾರಣ ಯುವತಿಯ ಶ್ವಾಸಕೋಶಗಳು ಸಾಕಷ್ಟು ಹಾನಿಯಾಗಿದ್ದರಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ರೋಗ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅತ್ಯಾಚಾರ ಯತ್ನ ಆರೋಪ ಇರುವುದರಿಂದ ಅಗತ್ಯ ವೈದ್ಯಕೀಯ ಪರೀಕ್ಷೆಗಳು ಮತ್ತು ಕೋವಿಡ್ ನಿಯಮಾವಳಿ ಪ್ರಕಾರ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗುವುದು ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ತಿಳಿಸಿದ್ದಾರೆ.