ಜಿನೀವಾ: ಕೊರೋನಾ ರೂಪಾಂತರಿ ಓಮಿಕ್ರಾನ್ ವೈರಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡುವ ಸಾಧ್ಯತೆಯಿದೆ ಎಂದು WHO ಕಳವಳ ವ್ಯಕ್ತಪಡಿಸಿದೆ. ಕೆಲವು ದೇಶಗಳಿಗೆ ಇದು ಹೆಚ್ಚು ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಓಮಿಕ್ರಾನ್ ರೂಪಾಂತರಿಯಲ್ಲಿ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಲಸಿಕೆ ಇದರ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆಯೇ ಮತ್ತು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕಳೆದ ವಾರ ಮೊದಲ ಓಮಿಕ್ರಾನ್ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿತ್ತು. ಆ ನಂತರ ಇಲ್ಲಿಯವರೆಗೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ, ವಿಶ್ವ ಸಂಸ್ಥೆಯು ತನ್ನ 194 ಸದಸ್ಯ ರಾಷ್ಟ್ರಗಳಿಗೆ ವ್ಯಾಕ್ಸಿನೇಷನ್ನತನ್ನು ವೇಗಗೊಳಿಸಲು ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಸೂಚನೆ ನೀಡಿದೆ. ಹೊಸ ರೂಪಾಂತರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಜಾಗತಿಕ ಅಪಾಯ ಅತಿ ಹೆಚ್ಚು ಎಂದು ವಿಶ್ವ ಸಂಸ್ಥೆ ಹೇಳಿದೆ.