ಬೆಂಗಳೂರು: ಕೋವಿಡ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ಸಬ್ ಕಮಿಟಿ ಜೊತೆ ಎಸ್ಐಟಿ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರು, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಂಥ ಸಂದರ್ಭದಲ್ಲಿ ಬಿಜೆಪಿ ಸರಕಾರವು ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದೆ. ಆರೋಗ್ಯ ಸಚಿವರು ನೂರಾರು ಕೋಟಿ ಹಗರಣದಲ್ಲಿ ಭಾಗಿ ಆಗಿದ್ದಾರೆಂದು ತಿಳಿಸಿ, ಆ ಹಗರಣವನ್ನು ಎಸ್ಐಟಿ ತನಿಖೆಗೆ ಕೊಡಲು ನಿರ್ಧರಿಸಿದ್ದಾರೆ. ಎಸ್ಐಟಿ ತನಿಖೆಗೆ ಕೊಡಲು ಮತ್ತು ಅದಕ್ಕೂ ಮೊದಲು ಉಪ ಸಮಿತಿ ಮಾಡಲು ನಮ್ಮ ವಿರೋಧವಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದು ಹೊರಗಡೆ ಬರಲಿ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷಕ್ಕಿಂತ ಜಾಸ್ತಿ ಆಗಿದೆ. ಇದುವರೆಗೆ ಈ ಸರಕಾರ ಏನು ಮಾಡುತ್ತಿತ್ತು? ಅದನ್ನು ಹೇಳಲು ಒಂದೂವರೆ ವರ್ಷ ಬೇಕಾಯಿತೇ? ಎಂದು ಪ್ರಶ್ನಿಸಿದರು.