ಕೋಲ್ಕತ್ತಾ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಮದುವೆ, ಸಭೆ, ಸಮಾರಂಭಗಳು ಮುಂದೂಡಲಾಗಿದೆ. ಆದರೆ ಇಲ್ಲೊಂದು ಜೋಡಿಯು ಅದ್ಧೂರಿಯಾಗಿ ಮದುವೆ ಆಗಿ ಕುಟುಂಬಸ್ಥರಿಗೆ ಊಟವನ್ನು ಹಾಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಸಂದೀಪನ್ ಹಾಗೂ ಅಧಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಈ ಜೋಡಿ ಇದೇ ಜನವರಿ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಗೂಗಲ್ ಮೀಟ್ ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಝೊಮ್ಯಾಟೊ ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಈ ಕುರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ವರ ಸಂದೀಪ್, ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಈ ಬಾರಿಯೂ ಕೊರೊನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್ ಅನ್ನು ಕಳುಹಿಸಲಾಗುವುದು. ಊಟವನ್ನು ಝೊಮ್ಯಾಟೊ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ. ಮದುವೆಯನ್ನು ಗೂಗಲ್ ಮೀಟ್ ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್ ತಾಂತ್ರಿಕ ತಂಡವನ್ನು ನೇಮಿಸಿದ್ದಾರೆ ಎಂದು ಮದುವೆ ಕುರಿತಾಗಿ ಹೇಳಿಕೊಂಡಿದ್ದಾರೆ.