ಧಾರವಾಡ: ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಮತ್ತೆ 77 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ರಾತ್ರಿಯವರೆಗೆ 204 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಮತ್ತೆ 77 ಮಂದಿ ಸೋಂಕಿತರಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 281ಕ್ಕೆ ಏರಿಕೆ ಕಂಡಿದೆ.
ಪಾಸಿಟಿವ್ ಗೊಂಡ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಎಲ್ಲರಿಗೂ ಚಿಕಿತ್ಸೆ, ಔಷಧೋಪಚಾರ ನೀಡಲಾಗುತ್ತಿದೆ, ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ಇನ್ನೂ 1,822 ಮಂದಿಯ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಜೆ. ಪಾಟೀಲ ತಿಳಿಸಿದ್ದಾರೆ.
ವರದಿಯಾಗಿರುವ 281 ಪ್ರಕರಣಗಳಲ್ಲಿ, ಕೇವಲ 6 ಜನರಲ್ಲಿ ಮಾತ್ರ ರೋಗದ ಸಾಮಾನ್ಯ ಲಕ್ಷಣಗಳಿವೆ. ಉಳಿದ 275 ಜನರಲ್ಲಿ ಯಾವುದೇ ರೋಗದ ಲಕ್ಷಣಗಳು ಇಲ್ಲ. ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.