ಮಂಗಳೂರು: ಕೋವಿಡ್-19 ಸೋಂಕಿನಿಂದ ಮೃತಪಟ್ಟ ಎಲ್ಲಾ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರಿಗೆ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಳಂತೆ ತಲಾ 50,000 ರೂ.ಗಳ ಪರಿಹಾರ ಧನ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್- 19ನಿಂದಾಗಿ ಸಾವು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯ ದತ್ತಾಂಶದಲ್ಲಿ ಲಭ್ಯವಿಲ್ಲದ ಪ್ರಕರಣಗಳನ್ನು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಕುಂದುಕೊರತೆ ನಿವಾರಣಾ ಸಮಿತಿಯಲ್ಲಿ ತೀರ್ಮಾನಿಸಿ ಸ್ಟೇಟ್ ಕೋವಿಡ್ ವಾರ್ ರೂಂ ಲೈನ್ ಲಿಸ್ಟ್ನಲ್ಲಿ ಸೇರ್ಪಡೆಗೊಳಿಸಿದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಪರಿಹಾರ ಪಾವತಿಸಲು ಆದೇಶ ಹೊರಡಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ದವಾರಸುದಾರರಿಗೆ ಪರಿಹಾರ ನೀಡಲು ಅರ್ಜಿ ಸ್ವೀಕಾರ ಹಾಗೂ ಅರ್ಹ ವ್ಯಕ್ತಿಗಳಿಗೆ ಪರಿಹಾರ ಪಾವತಿಸುವ ಕುರಿತು ನಿರ್ದೇಶನ ನೀಡಲಾಗಿದ್ದು, ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ನಿರ್ದೇಶನಗಳು ಇಂತಿವೆ:
1. 2022ರ ಮಾರ್ಚ್ 20 ಕ್ಕಿಂತ ಮೊದಲು ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು 2022ರ ಮಾರ್ಚ್ 20 ರಿಂದ 60 ದಿನಾಂಕವನ್ನು ಜೂನ್ 30ರ ಅಂತ್ಯದೊಳಗೆ ಕಾಲಮಿತಿ ವಿಸ್ತರಿಸಲಾಗಿದೆ.
2. 2022ರ ಮಾರ್ಚ್ 20ರ ನಂತರ ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ 90 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
3. ಸ್ವೀಕೃತವಾದ ಅರ್ಜಿಗಳ ಸಂಸ್ಕರಣಿ ಹಾಗೂ ಪರಿಹಾರ ಪಾವತಿಗೆ ಅರ್ಜಿ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಕಾಲಮಿತಿ ಅನ್ವಯವಾಗುತ್ತದೆ.
4. ಕೋವಿಡ್ 19 ವೈರಾಣು ಸೋಂಕಿನಿಂದ ತಮ್ಮ ಬಂಧುಗಳನ್ನು, ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವನ್ನು ಗಮನದಲ್ಲಿರಿಸಿಕೊಂಡು, ಮಾನವೀಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ವಿಪತ್ತು ಪರಿಹಾರ ನಿಧಿಯಿಂದ 50,000 ರೂ.ಗಳ ಪರಿಹಾರ ಮೊತ್ತವನ್ನು ಮೃತರ ಕಾನೂನು ಬದ್ದ ವಾರಸುದಾರರಿಗೆ ಪಾವತಿಸಲು ಎಲ್ಲಾ ರಾಜ್ಯಗಳಿಗೆ ಆದೇಶಿಸಿರುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳಲ್ಲಿ ಯಾವುದೇ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆಗಳ ಆಧಾರದ ಮೇಲೆ ಪರಿಹಾರ ಪಡೆದು, ಸರ್ಕಾರದ ಉದ್ದೇಶವನ್ನು ದುರುಪಯೋಗ ಪಡಿಸಿಕೊಂಡಲ್ಲಿ ಅದು ನೈತಿಕತೆಗೆ ವಿರುದ್ಧವಾದ ಕ್ರಮವಾಗಿರುತ್ತದೆ ಆದ್ದರಿಂದ ಯಾವುದೇ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದು, ತದನಂತರ ಅದು ಸುಳ್ಳು ಎಂದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳ ಪರಿಹಾರ ಮೊತ್ತವನ್ನು ವಸೂಲು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.
ಯಾವುದೇ ಅರ್ಜಿದಾರರು ಕೋವಿಡ್-19 ಮರಣ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಮಾಹಿತಿ, ನಕಲಿ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದಿದ್ದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳು, ವಿಪತ್ತು ನಿರ್ವಹಣಾ ಅಧಿನಿಯಮ-2005ರ ನಿಯಮ 52ರಡಿ ಸೂಕ್ತ ದಂಡದೊಂದಿಗೆ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಕೋವಿಡ್-19 ಪರಿಹಾರ ಪಾವತಿಯ ಮಾರ್ಗಸೂಚಿಗಳಲ್ಲಿ ಸೂಚಿಸಿರುವಂತೆ ಸೂಕ್ತ ವಿಚಾರಣೆ ನಡೆಸದೆ, ಮನವಿಗಳನ್ನು ಪರಿಶೀಲಿಸದೇ ಕೋವಿಡ್-19 ಪರಿಹಾರ ವಿತರಣೆಗ ಶಿಫಾರಸ್ಸು ಮಾಡುವಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧವೂ ಸಹ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ಶಿಸ್ತಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಕಂದಾಯ ಇಲಾಖೆ, ವಿಪತ್ತು ನಿರ್ವಹಣೆಯ ಉಪ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ