ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಪಾಪ್ಯುಲರ್ ಫ್ರಂಟ್ ನಿಂದ ಕೊರೋನ ಬಾಧಿತ ಮಹಿಳೆಯ ಅಂತ್ಯ ಸಂಸ್ಕಾರ

Prasthutha|

ಉಡುಪಿ: ಕೊರೋನ ಬಾಧಿತರಾಗಿ ಮೃತರಾದ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯದ ಮಹಿಳೆಯೋರ್ವರ ಅಂತ್ಯ ಸಂಸ್ಕಾರವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್,  ಮೊಗವೀರ ಯುವ ಸಂಘಟನೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನೆರವೇರಿಸಲಾಯಿತು.

- Advertisement -

ಬಳ್ಳಾರಿಯ ಮೂಲದ ಈ ಮಹಿಳೆ  ಆಗಸ್ಟ್   29ರಂದು ಮೃತಪಟ್ಟಿದ್ದರು. ಮೂವರು ಹೆಣ್ಮಕ್ಕಳು ಕಳೆದ ಹಲವು ದಿನಗಳಿಂದ ತಾಯಿಯ ಚಿಕಿತ್ಸೆಗಾಗಿ ತಮ್ಮಲ್ಲಿದ್ದ ಎಲ್ಲಾ ಹಣವನ್ನು ಖರ್ಚು ಮಾಡಿದ್ದರೂ, ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲು ಅಥವಾ ಇಲ್ಲಿಯೇ ಅಂತ್ಯ ಕ್ರಿಯೆ ನೆರವೇರಿಸಲು ಕೂಡ  ಕೈಯಲ್ಲಿ ಹಣವಿಲ್ಲದೆ ಕಂಗಾಲಾಗಿದ್ದ ಆ ಹೆಣ್ಮಕ್ಕಳು ಕಣ್ಣೀರಿಡುವಂತಾಗಿತ್ತು.

ಪರಿಸ್ಥಿತಿ ಅರಿತ ಜಿ. ಶಂಕರ್ ಫ್ರಂಟ್ ಲೈನ್ ವಾರಿಯರ್ಸ್ ಉಡುಪಿ ಸಂಚಾಲಕ ಜಯ ಸಿ.ಕೋಟ್ಯಾನ್ ಮತ್ತು ಪಾಪ್ಯುಲರ್ ಫ್ರಂಟ್ ಸದಸ್ಯರು ಮುನೀರ್ ಕಲ್ಮಾಡಿಯವರ ನೇತೃತ್ವದಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾದರು.  ಪ್ರೊಟೆಸ್ಟೆಂಟ್ ಸಂಪ್ರದಾಯದಂತೆ ದಫನ ಕಾರ್ಯ ನೆರವೇರಿಸಲು ಉಡುಪಿ ಪರಿಸರದ ಹಲವಾರು ಚರ್ಚ್ ಗಳಲ್ಲಿ ವಿಚಾರಿಸಿದರೂ ಸೂಕ್ತ ಸ್ಪಂದನೆ ದೊರಕಲಿಲ್ಲ. ನಂತರ ಉಡುಪಿ  ನಗರ ಸಭೆಯ ಆಯುಕ್ತರನ್ನು ಸಂಪರ್ಕಿಸಿ, ಅವರ ಅನುಮತಿ ಪಡೆದು ಮತ್ತು ಮೃತ ಮಹಿಳೆಯ ವಾರೀಸುದಾರರಿಂದ  ಲಿಖಿತ ಒಪ್ಪಿಗೆ ಪಡೆದುಕೊಂಡು  ಉಡುಪಿಯ ಇಂದ್ರಾಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಹೆಣ್ಮಕ್ಕಳ  ಸಮ್ಮುಖದಲ್ಲಿ ದಫನ ಕ್ರಿಯೆ ನೆರವೇರಿಸಲಾಯಿತು.

- Advertisement -

ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕ ನಾಡೋಜ ಡಾ ಜಿ. ಶಂಕರ್ ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ್ ಕೆ.ಎಮ್. ರವರ ಮಾರ್ಗದರ್ಶನದಲ್ಲಿ, ಜಯ ಸಿ. ಕೋಟ್ಯಾನ್ ಮತ್ತು ಮುನೀರ್ ಕಲ್ಮಾಡಿಯವರ ನೇತೃತ್ವದಲ್ಲಿ ಅಂತ್ಯ ಕ್ರಿಯೆಯನ್ನು ನಡೆಸಲಾಯಿತು.  ಈ ಸಂದರ್ಭದಲ್ಲಿ ರವೀಂದ್ರ  ಶ್ರೀಯಾನ್,  ಚಂದ್ರೇಶ್ ಪಿತ್ರೋಡಿ, ವಿಠ್ಠಲ್ ಕರ್ಕೇರ ಬೆಳ್ಳಂಪಳ್ಳಿ, ರಫೀಕ್ ದೊಡ್ಡಣ್ಣ ಗುಡ್ಡೆ ಹಾಜರಿದ್ದರು. ರುದ್ರ ಭೂಮಿಯ ಮೇಲ್ವಿಚಾರಕ ನಾಗಾರ್ಜುನ ಪೂಜಾರಿ ಮತ್ತು  ಮನೋಹರ್ ಕರ್ಕಡ ಈ ವೇಳೆ ಸಹಕರಿಸಿದರು.

ಸೌಹಾರ್ದತೆಯನ್ನು ಸಾರುವ ಈ ಮಾನವೀಯ ಸೇವೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Join Whatsapp