ರಸ್ತೆ ಅಪಘಾತವೆಸಗಿದ ವ್ಯಕ್ತಿಗೆ 21 ದಿನ ಐದು ಬಾರಿ ನಮಾಝ್ ನಿರ್ವಹಿಸುವ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ

Prasthutha|

ಮುಂಬೈ: ರಸ್ತೆ ಅಪಘಾತ, ಜಗಳ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಮುಸ್ಲಿಮ್ ವ್ಯಕ್ತಿಯೊಬ್ಬರಿಗೆ ಮಹಾರಾಷ್ಟ್ರದ ಮಾಲೆಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, 21 ದಿನಗಳವರೆಗೆ ಐದು ಬಾರಿ ನಮಾಝ್ ನಿರ್ವಹಿಸಲು ಮತ್ತು ಎರಡು ಸಸಿಗಳನ್ನು ನೆಡಲು ಆದೇಶಿಸಿದೆ.
ಅಪರಾಧಿ ರವೂಫ್ ಖಾನ್ (30) ಈ ಶಿಕ್ಷೆಗೆ ಒಳಗಾದವನು. ರವೂಫ್ ವಿರುದ್ಧ 2010ರಲ್ಲಿ ರಸ್ತೆ ಅಪಘಾತದ ವೇಳೆ ಜಗಳ ತೆಗೆದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.
ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು), 325 (ಸ್ವಯಂಪ್ರೇರಣೆಯಿಂದ ತೀವ್ರ ಗಾಯಗೊಳಿಸುವುದು), 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಐಪಿಸಿ ಸೆಕ್ಷನ್ 323 ರ ಅಡಿಯಲ್ಲಿ ಖಾನ್ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿತ್ತು. ಮಾತ್ರವಲ್ಲ ಇತರ ಆರೋಪಗಳಿಂದ ಆತನನ್ನು ಖುಲಾಸೆಗೊಳಿಸಿತು.

- Advertisement -

ಮ್ಯಾಜಿಸ್ಟ್ರೇಟ್ ತೇಜ್’ವಂತ್ ಸಿಂಗ್ ಸಂಧು ಫೆಬ್ರವರಿ 27 ರಂದು ಶಿಕ್ಷೆ ವಿಧಿಸಿದ್ದಾರೆ. 21 ದಿನಗಳವರೆಗೆ ಐದು ಬಾರಿ ನಮಾಝ್ ನಿರ್ವಹಿಸಬೇಕು ಮತ್ತು ಎರಡು ಸಸಿಗಳನ್ನು ನೆಡಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಅಪರಾಧಿಗಳ ಪ್ರೊಬೆಷನರಿ ಕಾಯ್ದೆಯ ಸೆಕ್ಷನ್ 3 ಅನ್ನು ಅನ್ವಯಿಸಬಹುದು ಎಂದು ಹೇಳಿದ ನ್ಯಾಯಾಧೀಶರು, ಅಪರಾಧಿಯು ಅಪರಾಧವನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಚ್ಚರಿಕೆ ಅಥವಾ ಸೂಕ್ತ ಕ್ರಮ ಕೈಗೊಂಡು ಬಿಡುಗಡೆ ಮಾಡಲು ಈ ಕಾಯ್ದೆಯು ಮ್ಯಾಜಿಸ್ಟ್ರೇಟ್’ಗೆ ಅಧಿಕಾರ ನೀಡುತ್ತದೆ ಎಂದು ಹೇಳಿ ಈ ತೀರ್ಪನ್ನು ಪ್ರಕಟಿಸಿದರು.

“ನನ್ನ ಪ್ರಕಾರ, ಸೂಕ್ತ ಎಚ್ಚರಿಕೆ ನೀಡಬೇಕು ಎಂಬುದರ ಅರ್ಥ, ಅಪರಾಧವೆಸಗಿರುವುದರ ಬಗ್ಗೆ ಆತನಿಗೆ ಮನವರಿಕೆ ಮಾಡಿಕೊಟ್ಟು ಆರೋಪಿಯನ್ನು ತಪ್ಪಿತಸ್ಥನೆಂದು ಸಾಬೀತುಪಡಿಸುವುದಾಗಿದೆ. ಹೀಗೆ ಮಾಡಿದರೆ ಆತನಿಂದ ಮತ್ತೆ ಅಪರಾಧ ಪುನರಾವರ್ತನೆಯಾಗಲಾರದು ಎಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.

- Advertisement -

ಸೋನಾಪುರ ಮಸೀದಿ ಆವರಣದ ಬಳಿ ಅಪರಾಧ ನಡೆದಿರುವುದರಿಂದ ಖಾನ್ ಅಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ನೋಡಿಕೊಳ್ಳುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಅಲ್ಲದೆ, ಅವರು ನಿಷ್ಠಾವಂತ ಮುಸ್ಲಿಂ ಎಂದು ಒಪ್ಪಿಕೊಂಡಿದ್ದರಿಂದ, ಪ್ರಾರ್ಥನೆಗೆ ಸಮಯವನ್ನು ಹೊಂದಿಸಲು ಸಾಧ್ಯವಾಗದ ಕಾರಣ, 21 ದಿನಗಳ ಕಾಲ ಐದು ಬಾರಿ ನಮಾಝ್ ನಿರ್ವಹಿಸುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.



Join Whatsapp