ಕೊಚ್ಚಿ: ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಹಾಗೂ ಜೀವನದಲ್ಲಿ ಆರ್ಥಿಕ ಏಳಿಗೆಯನ್ನು ಪಡೆಯಲು ಮಾಟಮಂತ್ರದ ನೆಪದಲ್ಲಿ ಕೇರಳದ ದಂಪತಿಯೊಂದು ಇಬ್ಬರು ಮಹಿಳೆಯರ ಜೀವವನ್ನು ಬಲಿ ಪಡೆದು ಹತ್ಯೆಗೈದ ಅಚ್ಚರಿ ಘಟನೆಯೊಂದು ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ಸಂಭವಿಸಿದೆ.
ಮಾಟ ಮಂತ್ರದ ನೆಪದಲ್ಲಿ ಇಬ್ಬರು ಮಹಿಳೆಯರನ್ನು ಅಪಹರಿಸಿ ಕತ್ತು ಸೀಳಿ ಅವರ ದೇಹದ ಭಾಗಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲಾದ ಭಾಗದಲ್ಲಿ ಹೂಳಲಾಗಿದೆ ಈ ಕುರಿತು ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನರಬಲಿಗೆ ಕಾರಣಕರ್ತರಾದ ಶಂಕಿತ ಏಜೆಂಟ್ ಮತ್ತು ತಿರುವಲ್ಲಾ ಮೂಲದ ದಂಪತಿಗಳು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲಿಯಾದವರನ್ನು ಎರ್ನಾಕುಲಂನ ಪೊನ್ನುರುನ್ನಿಯ ಪದ್ಮಮ್ (52) ಮತ್ತು ಅಂಗಮಾಲಿ ಸಮೀಪದ ಕಾಲಡಿ ನಿವಾಸಿ ರೋಸ್ಲಿ ಎಂದು ಗುರುತಿಸಲಾಗಿದೆ. ಹಾಗೂ ಮಹಿಳೆಯರನ್ನು ಅಪಹರಿಸಿದವರನ್ನು ತಿರುವಲ್ಲಾ ಮೂಲದ ಸ್ಕಾರ್ಸೆಸರ್ ಭಗವಂತ್ ಸಿಂಗ್,ಪತ್ನಿ ಲೈಲಾ ಮತ್ತು ಏಜೆಂಟ್ ಮುಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.
ಶ್ರೀಮಂತರಾಗುವ ದುರಾಸೆಯಿಂದ ಈ ರೀತಿಯ ಬಲಿ ಪಡೆದದ್ದು ನಿಜಕ್ಕೂ ಆಘಾತಕಾರಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.