ಸುಳ್ಯ: ತಮಿಳುನಾಡು ಮೂಲದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸುಳ್ಯ ತಾಲೂಕಿನ ಎಲಿಮಲೆ ತೋಟದಲ್ಲಿ ಆಗಸ್ಟ್ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿವಕುಮಾರ ಅಲಿಯಾಸ್ ರಾಜನ್ (54), ಮುತ್ತುಲಕ್ಷ್ಮೀ (47) ಮೃತ ದಂಪತಿಗಳು. ಕಳೆದ ಕೆಲವು ವರ್ಷಗಳಿಂದ ದಂಪತಿ ದೇವಚಳ್ಳ ಗ್ರಾಮದ ಗುಡ್ಡದಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಯದಲ್ಲಿ ತೊಡಗಿದ್ದರು. ಅಲ್ಲಿಯೇ ಭೂಮಿಯನ್ನು ಸಹ ಖರೀದಿಸಿದ್ದರು.
ಸೋಮವಾರ ರಾತ್ರಿ ದಂಪತಿ ಮಧ್ಯೆ ಜಗಳ ನಡೆದಿದೆ. ಸುಳ್ಯದಲ್ಲಿ ವಾಸವಿದ್ದ ತಮ್ಮ ಮಗಳಿಗೆ ಈ ಕುರಿತಾಗಿ ತಾಯಿ ಮುತ್ತುಲಕ್ಷ್ಮೀ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಮನನೊಂದ ರಾಜನ್ ಮೊದಲು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಕಂಡ ಪತ್ನಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶಂಕಿಸಲಾಗಿದೆ.
ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದು, ಮಗ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ಇಬ್ಬರೂ ಹೆಣ್ಣುಮಕ್ಕಳಿಗೆ ಮದುವೆ ಆಗಿದೆ. ದಂಪತಿ ಸುಳ್ಯದಲ್ಲಿ ವಾಸವಾಗಿದ್ದರು.