ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ದೇಶಾದ್ಯಂತ ಏಕರೂಪದ ಕಾನೂನು ಅಗತ್ಯ: ಮುಖ್ಯಮಂತ್ರಿ

Prasthutha|

ಬೆಂಗಳೂರು: ದಕ್ಷಿಣ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ಪ್ರತ್ಯೇಕವಾದ ನಿರ್ಬಂಧನೆ ಇರುವುದರಿಂದ ಬಂದರು, ಪ್ರವಾಸೋದ್ಯಮ, ರಾಷ್ಟ್ರೀಯ ಹೆದ್ದಾರಿ, ರೈಲು ಹಾಗೂ ಇತರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ದೇಶಾದ್ಯಂತ ಏಕರೂಪದ ಕಾನೂನು ಜಾರಿಯಾದಲ್ಲಿ ಆರ್ಥಿಕ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿ, ನಿಯಮಾವಳಿಗಳಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಕಾನೂನು ಜಾರಿಯಲ್ಲಿದೆ. ಅದರ ಬದಲು ಏಕರೂಪದ ಕಾನೂನು ಜಾರಿಗೆ ಬಂದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಗತಿಶಕ್ತಿ ಯೋಜನೆ ಅನ್ವಯ ನಿಯಮಗಳನ್ನು ಸರಳೀಕರಣಗೊಳಿಸುವುದರಿಂದ ರಾಜ್ಯದಲ್ಲಿನ ಬಂದರುಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ಹಾಗೂ ಪ್ರವಾಸೋದ್ಯಮ ಬೆಳವಣಿಗೆ ಜೊತೆಗೆ ಉದ್ಯೋಗ ಸೃಷ್ಟಿಗೂ ನಾಂದಿಯಾಗಲಿದೆ ಎಂದರು.
ಬಂದರು ಅಭಿವೃದ್ಧಿಯಿಂದ ವಿದೇಶಿ ವಿನಿಮಯ ಏರಿಕೆಯ ಜೊತೆಗೆ ರೈಲು ಮತ್ತು ವಿಮಾನ ಸಂಪರ್ಕದಿಂದ ಆರ್ಥಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದಕ್ಕೆ ಇದು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ರಾಜ್ಯದ ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ಬಯಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ತ್ವರಿತವಾಗಿ ಈ ಯೋಜನೆಗಳಿಗೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಿಗೆ ಮನವಿ ಮಾಡಿದರು.
ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದಕ್ಷಿಣ ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.



Join Whatsapp