ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದಲ್ಲಿ ಭಾರತದ ಪ್ರಜಾಪ್ರಭುತ್ವ ಅವಸಾನಗೊಳ್ಳುವ ಭೀತಿ ಎದುರಾಗಿದೆ. ಇಂತಹ ಗಂಭೀರ ಅಪಾಯದಿಂದ ದೇಶವನ್ನು ಪಾರು ಮಾಡುವುದು ಪ್ರತಿಯೊಬ್ಬ ದೇಶಪ್ರೇಮಿಯ ಕರ್ತವ್ಯ. CPIMನ ಪ್ರತಿಯೊಬ್ಬ ಕಾರ್ಯಕರ್ತರು ಆ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸಬೇಕಾಗಿದೆ ಎಂದು ಸಿಪಿಐಂ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಹೇಳಿದ್ದಾರೆ.
ಅವರು ಮಂಗಳವಾರ ನಗರದ ಏಕೆಜಿ ಭವನದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಾಗಿ ಏರ್ಪಡಿಸಲಾಗಿದ್ದ ಸಿಪಿಐಎಂ ಜಿಲ್ಲಾ ಮಟ್ಟದ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧ್ವಂಸಗೊಳಿಸಿದೆ. ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಯತ್ನಿಸುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ಪೂರ್ತಿಯಾಗಿ ನಾಶಗೊಳಿಸಿ ದುಡಿಯುವ ಜನತೆಯನ್ನು ಜೀತದಾಳುಗಳ ಮಟ್ಟಕ್ಕೆ ತಳ್ಳಲಾಗಿದೆ. ಇಲೊಕ್ಟ್ರೋಬಾಂಡ್ ಹಗರಣ ಮೋದಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅನಾವರಣಗೊಳಿಸಿದೆ ಎಂದು ವಿವರಣೆ ನೀಡಿದರು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಮೂರೂವರೆ ದಶಕಗಳಿಂದ ದ.ಕ. ಜಿಲ್ಲೆಯಲ್ಲಿ ಸತತ ಗೆಲುವು ಕಾಣುತ್ತಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಲೇಬೇಕಿದೆ. ಬಿಜೆಪಿಯನ್ನು ಸೋಲಿಸದೆ ಜಿಲ್ಲೆ ಅಭಿವೃದ್ದಿ ಸಾಧಿಸಲು ಸಾಧ್ಯವಿಲ್ಲ. ಕೋಮು ಧ್ರುವೀಕರಣಕ್ಕೆ ಅವಕಾಶ ಆಗದಂತೆ ನಿರುದ್ಯೋಗ, ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣ ಜಿಲ್ಲೆಯ ಚುನಾವಣಾ ಪ್ರಚಾರದ ಪ್ರಧಾನ ವಿಷಯ ಆಗುವಂತೆ ನೋಡಬೇಕು ಎಂದು ಹೇಳಿದರು
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಚುನಾವಣಾ ಪ್ರಚಾರದ ಕಾರ್ಯಯೋಜನೆಯನ್ನು ಸವಿವರವಾಗಿ ಮಂಡಿಸಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಸುಕುಮಾರ್ ತೊಕ್ಕೊಟ್ಟು, ವಸಂತ ಆಚಾರಿ, ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಮಾತನಾಡಿದರು.
CPIM ಜಿಲ್ಲೆಯ ಹಿರಿಯ ನಾಯಕ ಜೆ. ಬಾಲಕೃಷ್ಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಸಮಾರೋಪ ಭಾಷಣ ಮಾಡಿದರು.CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸದಾಶಿವ ದಾಸ್ ವಂದಿಸಿದರು.