ಕೋಟ: ಪ್ರವಾದಿ ಬಗ್ಗೆ ನೂಪುರ್ ಶರ್ಮಾ ನೀಡಿದ ಹೇಳಿಕೆ ವಿರೋಧಿಸಿ ರಾಜಸ್ತಾನದ ಕೋಟ ಮಹಾನಗರ ಪಾಲಿಕೆಯ ಬಿಜೆಪಿ ಕೌನ್ಸಿಲರ್ ತಬಸ್ಸುಮ್ ಮಿರ್ಜಾ ಅವರು ಪಕ್ಷ ಮತ್ತು ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಕ್ರಿಶನ್ ಕುಮಾರ್ ಸೋನಿ ಇಬ್ಬರಿಗೂ ಕಾರಣ ನೀಡಿ ರಾಜೀನಾಮೆ ಪತ್ರ ತಲುಪಿಸಿದ್ದಾರೆ.
ಬಿಜೆಪಿಯಿಂದ ಅಮಾನತುಗೊಂಡಿರುವ ವಕ್ತಾರೆ ನೂಪುರ ಶರ್ಮಾರ ಅವಹೇಳನಕಾರಿ ಹೇಳಿಕೆಯು ಸರ್ವತ್ರ ಖಂಡನೆಗೊಳಗಾಗಿತ್ತು. ಕೋಟ ಮಹಾನಗರ ಪಾಲಿಕೆಯ 14ನೇ ವಾರ್ಡ್ ಸದಸ್ಯೆ ತಬಸ್ಸುಮ್ ಮಿರ್ಜಾ ಸೋಮವಾರ ಕಾರಣ ಬರೆದು ತಿಳಿಸಿ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದರು. ಹತ್ತು ವರುಷಗಳ ಹಿಂದೆ ಬಿಜೆಪಿ ಸೇರಿರುವ ತಬಸ್ಸುಮ್ ಅವರು ಸದ್ಯದ ಪರಿಸ್ಥಿತಿಯಲ್ಲಿ ನಡೆದಿರುವ ವಿಷಾದಕರ ಘಟನೆಯಿಂದ ಪಕ್ಷದಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಲ್ಲದೆ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾರಿಗೆ ತಬಸ್ಸುಮ್ ಅವರು ಪ್ರತ್ಯೇಕ ಪತ್ರ ನೀಡಿದ್ದಾರೆ. ಪಕ್ಷದ ವಕ್ತಾರೆಯೇ ಪ್ರವಾದಿವರ್ಯರ ಬಗ್ಗೆ ಅವಮಾನಕರವಾಗಿ ಮಾತನಾಡುತ್ತಾರೆ, ಅಂಥವರನ್ನು ಹತೋಟಿಯಲ್ಲಿಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ಈ ಪಕ್ಷದಲ್ಲಿ ಮುಂದುವರಿದು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ವಿಷಾದಿಸುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
“ಪ್ರವಾದಿ ಬಗ್ಗೆ ಮಾನಹಾನಿಕರವಾಗಿ ಮಾತನಾಡುವವರು ಇರುವ ಪಕ್ಷದಲ್ಲಿ ನಾನು ಇನ್ನೂ ಇರುವುದಾದರೆ ನನ್ನಷ್ಟು ದೊಡ್ಡ ತಪ್ಪಿತಸ್ಥೆ ಇನ್ಯಾರೂ ಇರುವುದಿಲ್ಲ. ಈಗ ನನ್ನ ಮನಸಾಕ್ಷಿ ಎಚ್ಚರಗೊಂಡಿದೆ. ಆದ್ದರಿಂದ ಇನ್ನು ಮುಂದೆಯೂ ಈ ಪಕ್ಷದಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ” ಎಂದು ತಬಸ್ಸುಮ್ ತಮ್ಮ ಪತ್ರದಲ್ಲಿ ಬರೆದು ತಿಳಿಸಿದ್ದಾರೆ. ಅಧ್ಯಕ್ಷರಾದ ಪೂನಿಯಾ ಮತ್ತು ಸೋನಿಯವರಿಗೆ ನಾನು ಮಿಂಚಂಚೆ ಮತ್ತು ಅಂಚೆ ಮೂಲಕವೂ ರಾಜೀನಾಮೆ ಪತ್ರಗಳನ್ನು ಕಳುಹಿಸಿರುವೆ ಎಂದು ತಬಸ್ಸುಮ್ ಮಿರ್ಜಾ ಅವರು ಪತ್ರಿಕೆಗಳವರ ಪ್ರಶ್ನೆಗೆ ಉತ್ತರಿಸಿದರು. ಆದರೆ ಇಲ್ಲಿಯವರೆಗೆ ನನಗೆ ರಾಜೀನಾಮೆ ಪತ್ರ ತಲುಪಿಲ್ಲ ಎಂದು ಸೋನಿಯವರು ಹೇಳಿದ್ದಾರೆ.