►ಅಭ್ಯರ್ಥಿಯಾಗಿ SDPI ದ.ಕ ಜಿಲ್ಲಾಧ್ಯಕ್ಷ ಕಣಕ್ಕೆ?
ಮಂಗಳೂರು : ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಸ್‌ಡಿಪಿಐ ಸಿದ್ಧತೆ ಮಾಡಿದೆ ಎಂದು ಪ್ರಸ್ತುತ ನ್ಯೂಸ್‌ಗೆ SDPI ಮೂಲಗಳಿಂದ ತಿಳಿದುಬಂದಿದೆ. ಎಸ್‌ಡಿಪಿಐ ಸ್ಪರ್ಧೆಗಿಳಿದರೆ ಚುನಾವಣಾ ಕಣ ಮತ್ತಷ್ಟು ಕಾವು ಪಡೆಯುವ ಸಾಧ್ಯತೆ ಇದೆ.
ಕಳೆದ ಬಾರಿ ಈ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧೆ ನಡೆಸಿರುವುದರಿಂದ ಉಪಚುನಾವಣೆಯಲ್ಲೂ ಪಕ್ಷ ಸ್ಪರ್ಧೆ ನಡೆಸಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಎಸ್‌ಡಿಪಿಐ ಮೂವರು ಅಭ್ಯರ್ಥಿಗಳನ್ನು ಗುರುತಿಸಿದ್ದು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮತ್ತು ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ. ಈ ಮೂವರಲ್ಲಿ ಒಬ್ಬರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅನ್ವರ್ ಸಾದತ್ ಬಜತ್ತೂರು ಅವರ ಹೆಸರನ್ನು ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಎಸ್‌ಡಿಪಿಐ ಸ್ಪರ್ಧೆ ಬಗ್ಗೆ ಇಂದು ಅಥವಾ ನಾಳೆ ಅಂತಿಮ ತೀರ್ಮಾನ ಹೊರಬರುವ ಸಾಧ್ಯತೆಯಿದ್ದು ಗುರುವಾರದಂದು ಎಸ್‌ಡಿಪಿಐ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಉಡುಪಿ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು ಅಕ್ಟೋಬರ್ 21 ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 3 (ಗುರುವಾರ) ಕೊನೆಯ ದಿನವಾಗಿದೆ. ಈವರೆಗೂ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್‌ನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಹೆಸರು ಕೇಳಿಬರುತ್ತಿದೆ. ಇಂದು ಅಥವಾ ನಾಳೆ ಬಿಜೆಪಿ, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.