ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ: ಸಚಿವ ಡಾ. ಸುಧಾಕರ್‌ ರಾಜೀನಾಮೆಗೆ ‘ಆಪ್’ ಆಗ್ರಹ

Prasthutha|

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದರ ಬಗ್ಗೆ ಗಂಭೀರ ಆರೋಪ ಮಾಡಿರುವ ಆಮ್‌ ಆದ್ಮಿ ಪಕ್ಷವು, ಆರೋಗ್ಯ ಸಚಿವ ಡಾ. ಸುಧಾಕರ್‌ರ ರಾಜೀನಾಮೆಗೆ ಆಗ್ರಹಿಸಿದೆ. ರಾಜ್ಯ ಆರೋಗ್ಯ ಇಲಾಖೆಯಲ್ಲಿ ನಿರಂತರವಾಗಿ ವಿವಿಧ ರೀತಿಯ ಅಕ್ರಮಗಳು ನಡೆಯುತ್ತಿದೆ, ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ, ಆರೋಗ್ಯ ಸಚಿವರ ರಾಜೀನಾಮೆ ಪಡೆದು ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಆಪ್ ಒತ್ತಾಯಿಸಿದೆ.

- Advertisement -

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, “ಆರೋಗ್ಯ ಇಲಾಖೆಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ, ಬಡ್ತಿ ಹಾಗೂ ವರ್ಗಾವಣೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಔಷಧಿಗಳ ಖರೀದಿ, ವೈದ್ಯಕೀಯ ಉಪಕರಣಗಳು ಮತ್ತು ನಿರ್ಮಾಣ ಕಾಮಗಾರಿ ಹಾಗೂ ಮೂಲಸೌಕರ್ಯ ಕಲ್ಪಿಸುವುದರಲ್ಲಿ ಭಾರೀ ಪ್ರಮಾಣದ ಅಕ್ರಮವಾಗುತ್ತಿದೆ ಎಂದು ಆರೋಪಿಸಿದರು.

ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧಿ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಬಿಜೆಪಿ ಮಾಜಿ ಶಾಸಕ ಸಾರ್ವಭೌಮ ಬಗಲಿ ಮತ್ತು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ದೂರನ್ನು ನೀಡಿದ್ದರು. ಆದರೆ ಈ ಪ್ರಕರಣಕ್ಕೆ ತನಿಖೆ ನಡೆಸದೆ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದಾರೆ. ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಕಾಳೇಗೌಡ ಆಗ್ರಹಿಸಿದ್ದಾರೆ.




Join Whatsapp