ಬೆಂಗಳೂರಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ಅಧಿಕಾರಿಗಳು, ಎಂಜಿನಿಯರ್ ಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಮಳೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಅನಾಹುತಗಳ ಬಗ್ಗೆ ವರದಿಯಾದರೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ವಾರ್ ರೂಮ್ ಮೂಲಕ ಕಟ್ಟೆಚ್ಚರ ವಹಿಸಬೇಕು. ಸಂಭವನೀಯ ಮಳೆ ಅನಾಹುತಗಳ ಬಗ್ಗೆಯೂ ನಿಗಾ ವಹಿಸಬೇಕು. ಎಲ್ಲೇ ಏನೇ ಅನಾಹುತವಾದರೂ ಸಮಾರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಾಗರಿಕರಿಗೆ ತೊಂದರೆ ಆಗದಂತೆ ಪೊಲೀಸ್, ಬೆಸ್ಕಾಂ, ಜಲ ಮಂಡಳಿ ಮತ್ತಿತರ ಇಲಾಖೆಗಳ ಜತೆ ಪರಸ್ಪರ ಸಮನ್ವಯ, ಸಹಕಾರ ಸಾಧಿಸಬೇಕು ಎಂದು ಅವರು ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ.