ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಮ್ ದಮ್’ನ ಸೆವೆನ್ ಟ್ಯಾಂಕ್ ರಸ್ತೆಯಲ್ಲಿ ತೆರೆದ ಮ್ಯಾನ್’ಹೋಲ್’ಗೆ ಬಿದ್ದು ಆಟೋ ಚಾಲಕನೊಬ್ಬ ದಾರುಣವಾಗಿ ಸಾವಿಗೀಡಾಗಿದ್ದಾನೆ. ಮೃತನನ್ನು ರಂಜನ್ ಸಾಹಾ (52) ಎಂದು ಗುರುತಿಸಲಾಗಿದೆ.
ಆಟೋ ಚಾಲಕನಾಗಿದ್ದ ರಂಜನ್ ಸಾಹಾ, ಕೆಲಸ ಮುಗಿಸಿ ಆಟೋವನ್ನು ಮಾಲೀಕರ ಮನೆಯಲ್ಲಿರಿಸಿದ ಬಳಿಕ ಬೆಡಿಪಾರಾದಲ್ಲಿರುವ ತನ್ನ ಮನೆಯ ಕಡೆ ನಡೆದುಕೊಂಡು ಬರುತ್ತಿದ್ದ ವೇಳೆ ಸೆವೆನ್ ಟ್ಯಾಂಕ್ ರಸ್ತೆಯಲ್ಲಿ ಮುಚ್ಚಳವಿಲ್ಲದ ಮ್ಯಾನ್’ಹೋಲ್’ಗೆ ಬಿದ್ದಿದ್ದಾರೆ. ರಂಜನ್ ಸಾಹಾ ಕಿರುಚಾಟದ ಶಬ್ಧವನ್ನು ಕೇಳಿದ ಸ್ಥಳೀಯರು ಮ್ಯಾನ್ ಹೋಲ್’ನಿಂದ ಮೇಲಕ್ಕೆತ್ತಿ ಸಮೀಪದ RG ಕರ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದಾರೆ. ಆದರೆ ವಿಷಪೂರಿತ ಕೊಳಚೆ ನೀರು ದೇಹವನ್ನು ಸೇರಿದ್ದ ಕಾರಣ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ತನ್ನ ಗಂಡ ಪ್ರಾಣ ಕಳೆದುಕೊಂಡಿರುವುದಾಗಿ ಆರೋಪಿಸಿರುವ ರಂಜನ್ ಸಾಹಾ ಪತ್ನಿ, ಸೋಮಾ, ರಂಜನ್ ಸಾಹಾ ನಮ್ಮ ಕುಟುಂಬದ ದುಡಿಮೆಯ ಏಕೈಕ ಮೂಲವಾಗಿದ್ದರು. ಮುಂದೇನು ಮಾಡಬೇಕೆಂದು ತೋಚದಾಗಿದೆ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಮಾನವೀಯತೆಯ ಆಧಾರದಲ್ಲಿ ನಮಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ.