ಮಂಗಳೂರು: ನಿಗಮ-ಮಂಡಳಿ ಸ್ಥಾನಕ್ಕೆ ಕೊನೆಗೂ ಮೊದಲ ಪಟ್ಟಿ ಆಖೈರುಗೊಂಡಿದೆ. 39 ಮಂದಿ ಶಾಸಕರ ಹೆಸರು ಈ ಪಟ್ಟಿಯಲ್ಲಿದೆ. ಕಾರ್ಯಕರ್ತರ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಹೈಕಮಾಂಡ್ ಒಪ್ಪಿಗೆ ದೊರೆತರೆ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ನಿಗಮ-ಮಂಡಳಿ ನೇಮಕ ಆದೇಶ ಹೊರಬೀಳುವ ಸಾಧ್ಯತೆಯಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಮೊದಲ ಪಟ್ಟಿ ಅಂತಿಮಗೊಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಶಾಸಕರನ್ನು ಮಾತ್ರ ನೇಮಕ ಮಾಡಿ, ಲೋಕಸಭಾ ಚುನಾವಣೆ ನಂತರ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂಬ ಮಾತಿಗೆ ಸುರ್ಜೇವಾಲಾ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.