ಸಿದ್ಧಾರ್ಥ ನಗರ: ದುಮರಿಯಾಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿಯ ವಿವಾದಿತ ಶಾಸಕ ರಾಘವೇಂದ್ರ ಸಿಂಗ್ ಅವರ ಪ್ರಚಾರದ ಮೇಲೆ ಚುನಾವಣಾ ಆಯೋಗ 24 ಗಂಟೆಗಳ ನಿಷೇಧವನ್ನು ಹೇರಿದೆ.
“ತನಗೆ ಮತ ಹಾಕದ ಹಿಂದೂಗಳ ರಕ್ತನಾಳಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ” ಎಂದು ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಿಷೇಧ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಜಾರಿಯಲ್ಲಿದ್ದು ಮಂಗಳವಾರ ಬೆಳಗ್ಗೆ 6 ಗಂಟೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ರಾಘವೇಂದ್ರ ಸಿಂಗ್ ಅವರಿಗೆ ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ದೀಪಕ್ ಮೀನಾ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಸಮಾಜದಲ್ಲಿ ದ್ವೇಷ ಹರಡುವ ಬಿಜೆಪಿ ಶಾಸಕನ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿದ್ದರು.
ರಾಘವೇಂದ್ರ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಾಪಿಸಿದ ಹಿಂದೂ ವಾಹಿನಿಯ ಉಸ್ತುವಾರಿಯಾಗಿದ್ದರು. ಬಿಜೆಪಿ ಶಾಸಕರು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಈ ನಿಷೇಧವನ್ನು ತಮ್ಮ ಪ್ರತಿಸ್ಪರ್ಧಿಗಳ ಪಿತೂರಿ ಎಂದು ಬರೆದಿದ್ದಾರೆ.