ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿವಾದಿತ ಮತಾಂತರ ನಿಷೇಧ ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕಾರವಾಗಿದೆ.
ನಿನ್ನೆ ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡಿಸಿದ್ದರು. ಈ ಬಗ್ಗೆ ಇಂದು ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆಯಿತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಮಸೂದೆ ಸಂವಿಧಾನ ವಿರೋಧಿಯಾಗಿದೆ. ರಾಜ್ಯದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂಮರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. 2001 ಮತ್ತು 2011 ರ ಜನಗಣತಿಯನ್ನು ನೋಡಿದರೆ ಸತ್ಯ ಏನೆಂದು ಅರಿವಾಗುತ್ತದೆ. 2001 ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ 83.86% ಹಿಂದೂಗಳ ಪ್ರಮಾಣ 2011 ಕ್ಕೆ ಶೇ. 84 ಕ್ಕೆ ಏರಿಕೆಯಾಗಿದೆ. ಮುಸ್ಲಿಮರ ಪ್ರಮಾಣ 12.23% ಇಂದ 12.92 ಆಗಿದೆ. ಕ್ರೈಸ್ತರ ಪ್ರಮಾಣ 1.91% ಇಂದ 1.87% ಗೆ ಇಳಿಕೆಯಾಗಿದೆ. ಇದು ನಮ್ಮ ರಾಜ್ಯದ ವಾಸ್ತವ ಸ್ಥಿತಿ ಎಂದು ಹೇಳಿದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಮೂಲ ನಿಯಮ. ಆದರೆ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯಲ್ಲಿ ಮಹಿಳೆಯರು, ಅಪ್ರಾಪ್ತರು, ಬುದ್ಧಿಭ್ರಮಣೆಯಾದವರು, ಪರಿಶಿಷ್ಟ ಜಾತಿ ಮತ್ತು ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ ಮಾತ್ರ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಈ ಅಸಮಾನತೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ.
ಹಿಂದೂ ಧರ್ಮದ ಜಾತಿಯತೆ, ಅಸ್ಪೃಶ್ಯತೆ, ಅಸಮಾನತೆಗಳನ್ನು ಸರಿಪಡಿಸಲು ಸತತವಾಗಿ ಪ್ರಯತ್ನ ಮಾಡಿದ ಬಾಬಾ ಸಾಹೇಬರು ಕೊನೆಗೆ ಅದು ಸಾಧ್ಯವಾಗದಿದ್ದಾಗ “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ” ಎಂದು ಹೇಳಿ ಬೌದ್ಧ ಧರ್ಮಕ್ಕೆ ಮತಾಂತರ ಗೊಂಡರು. ಜೊತೆಗೆ ಲಕ್ಷಾಂತರ ಜನರಿಗೆ ಸ್ವ ಇಚ್ಛೆಯಿಂದ ಮತಾಂತರಗೊಳ್ಳಲು ಕರೆನೀಡಿದರು.
ಬಲವಂತದಿಂದ, ಆಸೆ ಆಮಿಷ ಒಡ್ಡಿ, ಹೆದರಿಸಿ ಬೆದರಿಸಿ, ಮೋಸದ ಮೂಲಕ ಮತಾಂತರ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಇದರ ಜೊತೆಗೆ ಜಾತೀಯತೆ, ಅಸ್ಪೃಶ್ಯತೆ ಅನುಸರಿಸುತ್ತಿರುವವರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬುದು ನನ್ನ ಒತ್ತಾಯ ಎಂದು ಹೇಳಿದರು.
ಮತಾಂತರವನ್ನು ದೂಷಿಸುವ ಬದಲು, ಮತಾಂತರವಾಗಲು ನಮ್ಮಲ್ಲಿರುವ ದೋಷಗಳೇನು ಎಂಬುದನ್ನು ಗುರುತಿಸಿ ಸರಿಪಡಿಸುವ ಕೆಲಸವನ್ನು ಮಾಡಬೇಕು ಎಂದು ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇದು ನಾವು ಮಾಡಲೇಬೇಕಾದ ಕೆಲಸ. ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಅಮಾನವೀಯ, ಸಂವಿಧಾನ ಬಾಹಿರ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಮಾತು ಮುಂದುವರಿಸಿ, ನಮ್ಮ ಆಡಳಿತ ಕಾಲದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕುರಿತಂತೆ ಯಾವುದೇ ಪ್ರಸ್ತಾಪ ಆಗಿಲ್ಲ. ಈ ಹಿಂದಿನ ಕರಡಿನ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲು ಮಂಡಿಸುವುದಕ್ಕೆ ಸಲ್ಲಿಸಲು ನಾನು ಸಹಿ ಹಾಕಿದ್ದಾಗಿ ತಿಳಿಸಿದರು.
ಈಗ ವಿಧಾನಸಭೆಯಲ್ಲಿ ಬಿಜೆಪಿ ನಡೆಸುತ್ತಿರುವಂತ ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಅಜೆಂಡಾದೊಂದಿಗೆ ಮಂಡಿಸಲಾಗುತ್ತಿರುವಂತ ಕಾಯ್ದೆಯಾಗಿದೆ. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಸಿದ್ಧಪಡಿಸಲಾದ ಕರಡು ಆಗಿದೆ. ಅದರನ್ನು ಈಗ ಮಂಡಿಸಲಾಗಿದೆ. ಇದು ಮಧ್ಯಪ್ರದೇಶದ ಕರಡು ಆಗಿದ್ದು, ಹೆಸರು ಬದಲಿಸಿ ಕರ್ನಾಟಕ ಮತಾಂತರ ಕಾಯ್ದೆ ಎಂದು ಮಂಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಸೂದೆ ಅನುಮೋದನೆಗೆ ನಾವು ಒಪ್ಪಿಗೆ ಇಲ್ಲ ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ಇವರು ಕಾಯ್ದೆ ಪರವಾಗಿ ಇಲ್ಲ. ವಿರೋಧ ಮಾಡೇ ಮಾಡುತ್ತಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ, ನೀವು ಮತಕ್ಕೆ ಹಾಕುವಂತೆ ಸ್ಪೀಕರ್ ಕಾಗೇರಿಗೆ ತಿಳಿಸಿದರು.
ಅವರ ಸೂಚನೆಯಂತೆ ಸ್ಪೀಕರ್ ಕಾಗೇರಿಯವರು ಮಸೂದೆಯನ್ನು ಮತಕ್ಕೆ ಹಾಕಿದರು. ಈ ಮೂಲಕ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಅಂಗೀಕರಿಸಲಾಯಿತು. ಈ ಬಳಿಕ 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.
ವಿಧೇಯಕದ ಪ್ರಮುಖ ಅಂಶಗಳು:
ದೂರು ದಾಖಲಿಸಲು ಅವಕಾಶ: ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿ ದೂರು ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ವ್ಯಕ್ತಿಯನ್ನು ಆಮಿಷ, ಬಲವಂತ, ಒತ್ತಾಯದ ಮೂಲಕ ಮತಾಂತರಕ್ಕೆ ಮೂರು ವರ್ಷಗಳಿಂದ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ, 25 ಸಾವಿರ ರೂ.ದಂಡ ವಿಧಿಸಬಹುದಾಗಿದೆ. ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ ಅಥವಾ ಮಹಿಳೆ ಅಥವಾ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ 3 ವರ್ಷದಿಂದ 10 ವರ್ಷ ಜೈಲು ಶಿಕ್ಷೆ ಅಥವಾ 50ಸಾವಿರ ರೂ.ದಂಡ, ಸಾಮೂಹಿಕ ಮತಾಂತರಕ್ಕೆ 3ರಿಂದ 10ವರ್ಷ ಜೈಲು ಶಿಕ್ಷೆ, 1ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮದುವೆ ಅಸಿಂಧು: ಒಂದು ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೆ, ಆಕೆಯೇ ಮತಾಂತರಗೊಳ್ಳುವ ಮೂಲಕ ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆ ಅಸಿಂಧು ಎಂದು ಘೋಷಿಸುವುದು.
ಉದ್ದೇಶ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಅಂಗೀಕರಿಸಲು, ಆಚರಿಸಲು ಮತ್ತು ಪ್ರಸಾರ ಮಾಡಲು ಮುಕ್ತ. ರಾಜ್ಯದಲ್ಲಿ ಆಮಿಷ, ಒತ್ತಾಯ, ಬಲವಂತದ ಮತಾಂತರ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿವೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಇಂತ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.