ಬೆಂಗಳೂರು: ಪೊಲೀಸರ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ದೂರು ಸ್ವೀಕರಿಸಲು ಮತ್ತು ಅವರಿಗೆ ಕಾನೂನು ನೆರವು ನೀಡಲು ವಿರೋಧ ಪಕ್ಷ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಜಯೇಂದ್ರ, ಈ ಧೋರಣೆಯ ವಿರುದ್ಧ ಮಾತನಾಡಿದರೆ ಪೊಲೀಸ್ ಮೂಲಕ ಕಿರುಕುಳ ನೀಡಲಾಗುತ್ತೆ ಎಂದಿದ್ದಾರೆ. ಅಂತಹ ಕಾರ್ಯಕರ್ತರಿಗೆ ಬಿಜೆಪಿ ಕಾನೂನು ನೆರವು ನೀಡುತ್ತದೆ ಎಂದು X ಮೂಲಕ ಶಿಕಾರಿಪುರ ಶಾಸಕರೂ ಆದ ವಿಜಯೇಂದ್ರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಕಾರ್ಯಕರ್ತರು ಹಿಂದೆ ಸರಿಯುವ ಅಗತ್ಯವಿಲ್ಲ. ನಿಮ್ಮ ನೆರವಿಗೆ ನಾವಿದ್ದೇವೆ ಎಂದೂ ವಿಜಯೇಂದ್ರ ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಪೊಲೀಸರಿಗೆ ಅಧಿಕಾರ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿರುವ ನಮ್ಮ ಕಾರ್ಯಕರ್ತರ ಬಂಧುಗಳಿಗೆ ಯಾವುದೇ ತೊಂದರೆ, ಬೆದರಿಕೆ, ಕಿರುಕುಳ ಎದುರಾದರೆ ತಕ್ಷಣವೇ ಪಕ್ಷ ನೆರವಿಗೆ ಬರುತ್ತದೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ.