ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂದು ಅಧಿಕೃತ ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಬಲವಂತದ ಮತಾಂತರ ಮಾಡುತ್ತಿದೆ ಎಂದು ಇತ್ತೀಚೆಗೆ ವಿಧಾನಸೌಧ ಕಲಾಪ ವೇಳೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾಡಿರುವ ಆರೋಪ ಸುಳ್ಳು ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎರಡು ಗ್ರಾಮಗಳಲ್ಲಿ 46 ಕುಟುಂಬಗಳು ಸ್ವಇಚ್ಛೆಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಯಾರೂ ಬಲವಂತ ಮಾಡಿಲ್ಲ ಎಂದು ಹೊಸದುರ್ಗ ತಹಸೀಲ್ದಾರ್ ನಡೆಸಿದ ಅಧಿಕೃತ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದು, 18ರಿಂದ 20 ಸಾವಿರ ಹಿಂದೂಗಳನ್ನು ಮತಾಂತರ ಮಾಡಿದ್ದಾರೆ. ತನ್ನ ತಾಯಿಯೂ ಕೂಡ ಬಲವಂತದ ಮತಾಂತರಕ್ಕೆ ಒಳಗಾಗಿದ್ದಾರೆ ಎಂದು ಶೇಕರ್ ಆರೋಪಿಸಿದ್ದರು.
ತಾಯಿ ತನ್ನ ಹಣೆಗೆ ಕುಂಕುಮ ಹಾಕಲು ನಿರಾಕರಿಸುತ್ತಿದ್ದಾರೆ. ಅವರ ಮೊಬೈಲ್ ನಲ್ಲೂ ಕೂಡ ಕ್ರಿಶ್ಚಿಯನ್ ಪ್ರಾರ್ಥನೆಯ ರಿಂಗ್ ಟೋನ್ ಹಾಕಿಸಿದ್ದಾರೆ ಎಂದು ಬಿಜೆಪಿ ಶಾಸಕ ಅವಲತ್ತುಕೊಂಡಿದ್ದರು.