ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ: ಆರೋಪಿಗಳ ವಿಚಾರಣೆಗೆ ಉಡುಪಿ ಪೊಲೀಸರ ಹಿಂದೇಟು

Prasthutha|

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈವರೆಗೂ ಯಾವೊಬ್ಬ ಆರೋಪಿಯ ವಿಚಾರಣೆಯನ್ನು ಉಡುಪಿ ಪೊಲೀಸರು ನಡೆಸಿಲ್ಲ.

- Advertisement -

ಸಂತೋಷ್ ಪಾಟೀಲ್ ಸಾವಿನ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಕಳೆದ ಏ.12ರ ತಡರಾತ್ರಿ ಎಫ್ಐಆರ್ ದಾಖಲಾಗಿದೆ. ಆರೋಪಿ ನಂ.1-ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಆರೋಪಿ ನಂ.2-ಸಚಿವರ ಆಪ್ತ ಬಸವರಾಜ್ ಹಾಗೂ ಆರೋಪಿ ನಂ.3- ರಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸಂತೋಷ್ ಸೋದರ ಸಂಬಂಧಿ ಪ್ರಶಾಂತ ಪಾಟೀಲ್ ದೂರು ನೀಡಿದ್ದು, ಸಚಿವ ಈಶ್ವರಪ್ಪ ಮತ್ತು ಆಪ್ತರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಸಂತೋಷ್ ರಸ್ತೆ ಕಾಮಗಾರಿಯ 4 ಕೋಟಿ ಬಿಡುಗಡೆಗೆ ಮನವಿ ಮಾಡಿದ್ದರು. ಹಿಂಡಲಗ ಗ್ರಾಮದ ಶ್ರೀಲಕ್ಷ್ಮೀದೇವಿ ಜಾತ್ರೆಯ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿ ನಡೆದಿದ್ದು, ಬಿಲ್ ಮಂಜೂರು ಮಾಡದ ಕಾರಣ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನುಮಾನಾಸ್ಪದ ಸಾವು ಇದಾಗಿದ್ದು ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದು ಈ ಸಂಬಂಧ ಯಾರೊಬ್ಬರ ವಿಚಾರಣೆ ನಡೆದಿಲ್ಲ.

- Advertisement -

ಈ ನಡುವೆ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ನಗರದ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಉಡುಪಿ ನಗರ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಅವರಿಗೆ ನೆರವು ನೀಡಲು ಮಲ್ಪೆ ಇನ್ಸ್ಪೆಕ್ಟರ್ ಶರಣಗೌಡ ಹಾಗೂ ಬ್ರಹ್ಮಾವರ ಠಾಣೆ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರನ್ನು ನಿಯೋಜಿಸಲಾಗಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿ ಇರುವ ಈಶ್ವರಪ್ಪ ಅವರು ಶಾಸಕರಾಗಿರುವುದರಿಂದ ಪ್ರಕರಣವನ್ನು  ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಉಡುಪಿ ಎಸ್ಪಿ ಎನ್.ವಿಷ್ಣುವರ್ಧನ್ ತಿಳಿಸಿದರು.

Join Whatsapp