ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸರ ತನಿಖಾ ತಂಡದೊಂದಿಗೆ ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಗಳು ಕೈಜೋಡಿಸಿದ್ದು, ಪ್ರಕರಣದ ತನಿಖೆ ಚುರುಕುಗೊಂಡಿದೆ. ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳಾದ ಬ್ರಹ್ಮಾವರ ಸರ್ಕಲ್ ನ ಅನಂತ ಪದ್ಮನಾಭ ಮತ್ತು ಮಲ್ಪೆ ಸರ್ಕಲ್ ನ ಶರಣಗೌಡ ಅವರನ್ನು ತನಿಖಾಧಿಕಾರಿ ಪ್ರಮೋದ್ ಕುಮಾರ್ (ಉಡುಪಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್) ಅವರ ಸಹಾಯಕ್ಕೆ ನಿಯೋಜಿಸಲಾಗಿದೆ.
ಕಳೆದ ಏಪ್ರಿಲ್ 11 ರಂದು ಉಡುಪಿಗೆ ಆಗಮಿಸುವ ಮುನ್ನ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಪಾಟೀಲ್ ಅವರ ಸ್ನೇಹಿತರಾದ ಬೈಂದೂರಿನ ಪ್ರಶಾಂತ್ ಶೆಟ್ಟಿ ಮತ್ತು ಕೊಡಗಿನ ಸಂತೋಷ್ ಮೇದಪ್ಪ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.ಇಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ. ಆದರೆ, ವಿಚಾರಣೆಗಾಗಿ ಠಾಣೆಗೆ ಕರೆಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ವಿಷ ಮಿಶ್ರಿತ ಜ್ಯೂಸ್ ಸೇವಿಸಿ ಸಂತೋಷ್ ಶವವಾಗಿ ಪತ್ತೆಯಾಗಿದ್ದ ಹೋಟೆಲ್ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ, ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಶಾಂಭವಿ ಲಾಡ್ಜ್ನ ವ್ಯವಸ್ಥಾಪಕ ದಿನೇಶ್ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ, ಏ. 11 ರಂದು ಸಂಜೆ 5 ಗಂಟೆಗೆ ಸಂತೋಷ್ ತಮ್ಮ ಹೆಸರಿನಲ್ಲಿ ಎರಡು ರೂಮ್ ಗಳನ್ನು ಬುಕ್ ಮಾಡಿದ್ದರು. ಹಿಂಡಲಗಾದ ವಿಳಾಸವನ್ನು ಸಂತೋಷ್ ನೀಡಿದ್ದಾರೆ. ಮೇದಪ್ಪ ಹಾಗೂ ಶೆಟ್ಟಿಯವರು ಒಂದು ರೂಮ್ ನಲ್ಲಿ ಉಳಿದುಕೊಂಡಿದ್ದರೆ, ಸಂತೋಷ್ ಪಾಟೀಲ್ ಮತ್ತೊಂದು ರೂಮ್ ನಲ್ಲಿ ಉಳಿದುಕೊಂಡಿದ್ದರು. ರೂಮಿಗೆ ಬಂದ ಕೆಲ ಘಂಟೆಗಳ ಬಳಿಕ ಮೂವರೂ ಊಟಕ್ಕೆ ಹೋಗಿದ್ದರು.
ರಾತ್ರಿ 8.59ಕ್ಕೆ ಮರಳಿ ರೂಮಿಗೆ ಬಂದಿದ್ದಾರೆ. ಹೊರಗಿನಿಂದ ಬಂದಿದ್ದ ಸಂತೋಷ್ ಜ್ಯೂಸ್ ಕವರ್ ತಂದಿದ್ದರು. ಬೆಳಿಗ್ಗೆ 10.50ರ ಸುಮಾರಿಗೆ ಸಂತೋಷ್ ಅವರ ಸ್ನೇಹಿತರು ಲಾಡ್ಜ್ ರಿಸೆಪ್ಷನ್ ಬಳಿಗೆ ಬಂದು ನಂ.207 ಲಾಕ್ ಆಗಿದ್ದು, ಅವರ ಸ್ನೇಹಿತ ಬಾಗಿಲು ತೆಗೆಯುತ್ತಿಲ್ಲ. ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರು. ಇದನ್ನು ಕೇಳಿದ ಸಿಬ್ಬಂದಿಗಳು ನಕಲಿ ಕೀ ಮೂಲಕ ಬಾಗಿಲು ತೆಗೆದಿದ್ದಾರೆ. ಈ ವೇಳೆ ಸಂತೋಷ್ ಅವರು ಮಲಗಿದ್ದ ಭಂಗಿಯಲ್ಲಿಯೇ ಸತ್ತಿರುವುದು ಕಂಡು ಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎರಡೂ ರೂಮ್ ಗಳನ್ನು ಒಂದು ವಾರದವರೆಗೆ ಬಾಡಿಗೆಗೆ ನೀಡದಂತೆ ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.