ಬೆಂಗಳೂರು: ನಿರಂತರವಾಗಿ ತೈಲ ಬೆಲೆಯೇರಿಕೆ ನಡೆಸುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರೇ ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ. ಅದೇ ರೀತಿ ತೈಲಗಳ ಮೇಲಿನ ತೆರಿಗೆ ಯಾವಾಗ ಕಡಿತಗೊಳಿಸುತ್ತೀರಿ ಎಂದು ಪ್ರಶ್ನಿಸಿ ಅವರ ಕಾಲೆಳೆದಿದ್ದಾರೆ.
ಜನರಿಗೆ ಸಿನಿಮಾ ತೋರಿಸುವ ಬದಲು ಬದುಕುವ ದಾರಿ ತೋರಿಸಿ ಎಂದು ಕಾಂಗ್ರೆಸ್, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಟ್ವೀಟ್ ನಲ್ಲಿ ಛೇಡಿಸಿದೆ.
ಸತತ ಒಂದು ವಾರದಿಂದ ದೇಶದೆಲ್ಲೆಡೆ ತೈಲ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನರು ಬಿಜೆಪಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.