ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್ನಿಂದ ಭಾರತೀಯರನ್ನು ಸುಗಮವಾಗಿ ತಾಯ್ನಾಡಿಗೆ ಕರೆತರುವ ಉದ್ದೇಶದಿಂದ ಕೇಂದ್ರದ ಕೆಲವು ಸಚಿವರನ್ನು ಉಕ್ರೇನ್ ನ ನೆರೆ ರಾಷ್ಟ್ರಗಳಿಗೆ ಕಳುಹಿಸಲಾಗಿದೆ.
ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿ ಪ್ರಧಾನಿ ಮೋದಿ ಉನ್ನತಮಟ್ಟದ ಸಭೆ ಕರೆದಿದ್ದು. ಸ್ಥಳಾಂತರ ಕಾರ್ಯಾಚರಣೆಗೆ ನೆರವಾಗಲು ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ವಿ.ಕೆ. ಸಿಂಗ್ ಮುಂತಾದವರು ವಿದ್ಯಾರ್ಥಿಗಳಿಗೆ ನೆರವಾಗಲು ಉಕ್ರೇನ್ ನ ನೆರೆ ದೇಶಗಳಿಗೆ ತೆರಳಲಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆ ದೇಶಗಳಾದ ಪೋಲೆಂಡ್, ರೊಮೇನಿಯಾ, ಹಂಗೇರಿ, ಸ್ಲೊವಾಕಿಯಾ ಮೂಲಕ ಸ್ವದೇಶಕ್ಕೆ ಕರೆಸಿಕೊಳ್ಳಲಾಗುತ್ತಿದ್ದು ‘ಆಪರೇಷನ್ ಗಂಗಾ’ ಎಂಬ ಹೆಸರಿನ ಕಾರ್ಯಾಚರಣೆ ಮೂಲಕ ಸ್ಥಳಾಂತರ ನಡೆಯುತ್ತಿದೆ. ಈ ದೇಶಗಳ ಗಡಿಗಳಲ್ಲಿ ಉಕ್ರೇನ್ನಿಂದ ಬರುವ ಭಾರತೀಯರಿಗೆ ನೆರವಾಗಲೆಂದೇ ತೆರೆಯಲ್ಪಟ್ಟ ಕೇಂದ್ರಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ.