ED ಎಂಬ ತನಿಖಾ ಸಂಸ್ಥೆಯನ್ನು ಬಳಸಿ ವಿಪಕ್ಷಗಳ ಹಣಿಯುವಿಕೆಯ ಮುಂದುವರಿದ ಭಾಗವೇ ದೆಹಲಿ ಸಿಎಂ ಕೇಜ್ರಿವಾಲ್ ಬಂಧನ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶ ಮೋದಿಯ ಸರ್ವಾಧಿಕಾರಿ ಆಡಳಿತದ ವಿರುದ್ಧ ಒಗ್ಗಟ್ಟಾಗಿ ನಿಲ್ಲಲಿದೆ ಎಂಬ ಭಯ ಮೋದಿಯವರನ್ನು ಆವರಿಸಿದೆ. ಇದರಿಂದ ವಿಚಲಿತರಾಗಿರುವ ಮೋದಿಯವರು ವಿಪಕ್ಷಗಳನ್ನು ದುರ್ಬಲಗೊಳಿಸಲು ವಿಪಕ್ಷಗಳ ಮುಖ್ಯಮಂತ್ರಿಗಳನ್ನೇ ಗುರಿಯಾಗಿಸಿಕೊಂಡು ಒಬ್ಬರ ಹಿಂದೆ ಒಬ್ಬರನ್ನು ಬಂಧಿಸುತ್ತಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಆವರ ಬಂಧನದ ನಂತರ ಈಗ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ಮೋದಿ ಮತ್ತು ಬಿಜೆಪಿಯ ಹತಾಶೆ ದೇಶದ ಜನರ ಮುಂದೆ ಅನಾವರಣಗೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ತಮ್ಮ ಪ್ರಕಟಣೆಯ ಮೂಲಕ ಹೇಳಿದ್ದಾರೆ.

- Advertisement -

ಈ ಬಂಧನವನ್ನು ನಮ್ಮ ಪಕ್ಷ ಕಟುವಾದ ಶಬ್ದಗಳಿಂದ ಖಂಡಿಸುತ್ತದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಮೋದಿ ಸರ್ಕಾರ ಇಂತಹ ಕೃತ್ಯಗಳನ್ನು ಮಾಡುತ್ತಿದೆ. ದೇಶದಲ್ಲಿ ಹಿಂದೆಂದೂ ಕಂಡಿರದ ದೊಡ್ಡ ಮಟ್ಟದಲ್ಲಿ ವಿಪಕ್ಷಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಹಿಟ್ಲರ್ ಅಡಳಿತವನ್ನೂ ಮೀರಿಸುವ ಸರ್ವಾಧಿಕಾರ. ಒಂದೆಡೆ ಪ್ರಮುಖ ವಿಪಕ್ಷ ಕಾಂಗ್ರೆಸ್ ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಚುನಾವಣೆಯಲ್ಲಿ ಅದನ್ನು ಅಂಗವಿಕಲ ಮಾಡುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ ತನಗೆ ಚುನಾವಣೆಯಲ್ಲಿ ಸವಾಲಾಗಬಹುದಾದ ಎಲ್ಲ ರಾಜಕೀಯ ಪಕ್ಷಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡಲಾಗುತ್ತಿದೆ. ನಮ್ಮ ಎಸ್.ಡಿ.ಪಿ.ಐ ಪಕ್ಷದ ನಾಯಕರು ಮತ್ತು ಕಚೇರಿಗಳ  ಮೇಲೂ ನಿರಂತರವಾಗಿ ದಾಳಿಗಳು ನಡೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಫ್ಯಾಸಿಸ್ಟ್ ಬಿಜೆಪಿ ಇಡೀ ದೇಶವನ್ನು ಬಂಧಿಖಾನೆ ಮಾಡಲು ಹೊರಟಿದೆ. ದೇಶದ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ಇದು ಬಿಜೆಪಿ ಮತ್ತು ಮೋದಿಯ ಕೊನೆಯ ಘಟ್ಟದ ಆಟ. ಇನ್ನೇನು ಚುನಾವಣೆಗಳು ನಡೆಯಲಿದ್ದು, ಈ ಸರ್ವಾಧಿಕಾರಿ ಆಡಳಿತವನ್ನು ಜನ ಕಿತ್ತೆಸೆದು ಈ ದೇಶದ ಸಂವಿಧಾನದ ರಕ್ಷಣೆ ಮಾಡಲಿದ್ದಾರೆ ಎಂದು ಮಜೀದ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



Join Whatsapp