ಲಕ್ನೋ: ಪಕ್ಷವು ತೀರ್ಮಾನಿಸಿದರಷ್ಟೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಯೋಗಿ ಈ ರೀತಿಯಾಗಿ ಉತ್ತರಿಸಿದ್ದಾರೆ.
ನಮ್ಮ ಪಕ್ಷವು ಸಂಸದೀಯ ಮಂಡಳಿಯನ್ನು ಹೊಂದಿದೆ. ಯಾರು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಆ ಮಂಡಳಿ ನಿರ್ಧರಿಸುತ್ತದೆ ಎಂದರು. ಈ ಮೊದಲು ವಿದೇಶಗಳು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರಲಿಲ್ಲ ಆದರೆ ಈಗ ಭದ್ರತೆಯ ಖಾತ್ರಿ, ಉತ್ತಮ ರಸ್ತೆ ಸಂಪರ್ಕದಿಂದಾಗಿ ವಿದೇಶದಿಂದ ಹೂಡಿಕೆ ಮಾಡಲು ಇದೀಗ ದೇಶದ ಉತ್ತಮ ಸ್ಥಾನವೆನಿಸಿಕೊಂಡಿದೆ ಎಂದಿದ್ದಾರೆ.
ಮೊದಲೆಲ್ಲಾ ಜನರು ಉತ್ತರ ಪ್ರದೇಶ ಗುಂಡಿಗಳು ಹಾಗೂ ಹಳ್ಳಗಳಿಂದ ಕೂಡಿದೆ ಎನ್ನುತ್ತಿದ್ದರು. ಈಗ ಎಕ್ಸ್‌ಪ್ರೆಸ್ ವೇಗಳು ಹಾಗೂ ಚತುಷ್ಪಥ ರಸ್ತೆಗಳ ಸಂಪರ್ಕಕ್ಕೆ ಉತ್ತರ ಪ್ರದೇಶ ಹೆಸರುವಾಸಿಯಾಗಿದೆ ಎಂದು ನುಡಿದರು. ಉತ್ತರ ಪ್ರದೇಶವು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ಹಾಗೂ 2017 ಬಳಿಕ ರಾಜ್ಯವು ಇಂತಹ ಪರಿಸ್ಥಿತಿಯಿಂದ ಹೊರಬಂದಿದೆ. ನಮ್ಮ ವಿವಿಧ ಯೋಜನೆಗಳ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿವೆ ಎಂದರು.