ಕೊಡಗು: ನಿರಾಶ್ರಿತರ ಹೋರಾಟ ಸಮಿತಿಯಿಂದ ಮಾರ್ಚ್ 10 ರಂದು ಡಿಸಿ ಕಚೇರಿ ಮುಂದೆ ಗುಡಿಸಲು ನಿರ್ಮಿಸಿ ಹೋರಾಟ

Prasthutha|

ಮಡಿಕೇರಿ: ನಿರಾಶ್ರಿತರಿಗೆ ನೀಡಿದ ನಿವೇಶನಕ್ಕೆ ತೆರಳಲು ಸೇತುವ ನಿರ್ಮಾಣ ಕೂಡಲೇ ಆಗ ಬೇಕೆಂದು ಆಗ್ರಹಿಸಿ ನಿರಾಶ್ರಿತರ ಹೋರಾಟ ಸಮಿತಿ ವತಿಯಿಂದ ಡಿಸಿ ಕಚೇರಿ ಎದುರು ಮಾರ್ಚ್ 10ರಂದು ಗುಡಿಸಲು ನಿರ್ಮಿಸಿ ಹೋರಾಟ ಮಾಡುವುದಾಗಿ ನಿರಾಶ್ರಿತರ ಹೋರಾಟ ಸಮಿತಿ ಎಚ್ಚರಿಸಿದೆ.

- Advertisement -

ಎರಡು ಜಲಪ್ರಳಯಕ್ಕೆ ತುತ್ತಾಗಿ ತಮ್ಮ ಸರ್ವಸ್ವವನ್ನೂ ಕಳೆದು ಕೊಂಡು ಬೀದಿಗೆ ಬಿದ್ದ ನಿರಾಶ್ರಿತರಿಗೆ ನಿವೇಶನ ಒದಗಿಸಲು ತಿಂಗಳುಗಟ್ಟಲೆ ನಮ್ಮ ಸಮಿತಿಯು ಹೋರಾಟ ಮಾಡ ಬೇಕಾಯಿತು. ನಿವೇಶನ ಒದಗಿಸಿದ ಬಳಿಕ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇಂದು ಸೂರು ನಿರ್ಮಿಸಲು ಸಾಧ್ಯವಾಗದೆ ನಿರಾಶ್ರಿತರು ಕಂಗಾಲಾಗಿದ್ದಾರೆ ಎಂದು ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್ ಭರತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮಾನ್ಯ ಶಾಸಕರ ಸಮ್ಮುಖದಲ್ಲಿ ಎರಡೆರಡು ಬಾರಿ ನಿವೇಶನ ಹಂಚಿಕೆಗಾಗಿ ಚೀಟಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗಿತ್ತು. ಆದರೆ ನಿವೇಶನಕ್ಕೆ ತೆರಳಲು ಸೇತುವೆ ನಿರ್ಮಾಣಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಲು ಶಾಸಕರು ಆಸಕ್ತಿ ತೋರಲಿಲ್ಲ. ಅಧಿಕಾರಿಗಳು ಕೂಡಾ ಈ ಕುರಿತು ಯಾವುದೇ ಉತ್ಸಾಹ ತೋರಲಿಲ್ಲ.

ನಿವೇಶನ ಹಂಚಿಕೆಯ ಹಿಂದೆಯೂ ರಾಜಕೀಯ ನಡೆದಿದೆ ಎಂಬ ಸಂದೇಹ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಇತ್ತೀಚಿನ ಬಜೆಟ್ ನಲ್ಲಿಯೂ ನಿರಾಶ್ರಿತರಿಗಾಗಿ ಒಂದು ನಯಾ ಪೈಸೆ ಕೂಡಾ ಮೀಸಲಿಡಲಿಲ್ಲ. ನಮ್ಮ ಜಿಲ್ಲೆಯ ಶಾಸಕರುಗಳಾಗಲೀ ಸಂಸದರಾಗಲೀ ಈ ವಿಚಾರದ ಕುರಿತು ಮೌನ ಮೆರೆಯುತ್ತಿದ್ದಾರೆ. ಇದು ನಮ್ಮ ಜಿಲ್ಲೆಯ ಬಹು ದೊಡ್ಡ ದುರಾದೃಷ್ಟ ಎಂದರು. ನಿರಾಶ್ರಿತರ ನೆವೇಶನಕ್ಕೆ ತೆರಳಲು ಸೇತುವೆ ನಿರ್ಮಾಣ ಕಾರ್ಯವನ್ನು ಗ್ರಾಪಂ ಗೆ ಒಪ್ಪಿಸುವುದಾದರೆ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗುವ ಸಾಧ್ಯತೆ ಇದೆ.

- Advertisement -

ಮಾತ್ರವಲ್ಲ ನಿವೇಶನ ಒಂದು ಗ್ರಾಪಂ ವ್ಯಾಪ್ತಿ ಹಾಗೂ ನಿರಾಶ್ರಿತರು ಮತ್ತೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿಯ ಮೂಲಕವೇ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸ ಬೇಕೆಂದು ಆಗ್ರಹಿಸಿದರು. ನೂತನ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮಕ್ಕೆ ಮುಂದಾಗ ಬೇಕು. ಇಲ್ಲದಿದ್ದಲ್ಲಿ ಗುರುವಾರದ ಸಾಂಕೇತಿಕ ಹೋರಾಟವನ್ನು ಅಹೋರಾತ್ರಿಗೆ ವಿಸ್ತರಿಸಲಾಗುವುದು ಎಂದರು. ಈ ಸಂದರ್ಭ ತಾಪಂ ಮಾಜಿ ಸದಸ್ಯೆ ಸುಹಾದಾ ಆಶ್ರಫ್, ನೆಲ್ಯಹುದಿಕೇರಿ ಗ್ರಾಪಂ ಸದಸ್ಯೆ ಸಫಿಯಾ ಮುಹಮ್ಮದ್, ನಿರಾಶ್ರಿತರ ಹೋರಾಟ ಸಮಿತಿ ಸದಸ್ಯರಾದ ಹಬೀಬ್, ಶಿವರಾಮನ್ ಮತ್ತು ಚಂದ್ರನ್ ಎಂದರು.



Join Whatsapp