ಮಂಗಳೂರು: ಕೆಂಜಾರಿನಲ್ಲಿ ಕೋಸ್ಟ್‌ಗಾರ್ಡ್‌ ಅಕಾಡೆಮಿ ನಿರ್ಮಾಣ

Prasthutha|

►ಮಂಗಳೂರಿನಲ್ಲಿ ತಟರಕ್ಷಕ ಪಡೆಗೆ ದೇಶದ ಮೊದಲ ತರಬೇತಿ ಶಾಲೆ

- Advertisement -

ಮಂಗಳೂರು: ದೇಶದ ಮೊದಲ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿಯ ಸ್ಥಾಪನೆ ಪ್ರಕ್ರಿಯೆ ಮಂಗಳೂರಿನಲ್ಲಿ ಆರಂಭಗೊಂಡಿದೆ. ಕೆಂಜಾರಿನಲ್ಲಿ 158 ಎಕ್ರೆ ಭೂಮಿಯನ್ನು ಇದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಸುತ್ತಲೂ ಆವರಣ ಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿದೆ.

ಕೇಂದ್ರ ಸಚಿವ ಸಂಪುಟದಲ್ಲಿ ಅಕಾಡೆಮಿ ಸ್ಥಾಪನೆಗೆ ತಾತ್ವಿಕವಾಗಿ ಅನುಮೋದನೆ ಪಡೆದ ಬಳಿಕ ಹಂತ ಹಂತವಾಗಿ ಕೆಲಸ ನಡೆಯುತ್ತಿದ್ದು, 2026ರ ವೇಳೆಗೆ ಪೂರ್ಣ ಪ್ರಮಾಣದ ಅಕಾಡೆಮಿ ತಲೆ ಎತ್ತುವ ನಿರೀಕ್ಷೆ ಇದೆ.

- Advertisement -

ಕೆಂಜಾರು ಸೂಕ್ತ ಸ್ಥಳ

ಅಕಾಡೆಮಿ ಸ್ಥಾಪನೆಗೆ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಕರಾವಳಿಯಲ್ಲಿ ಅಕಾಡೆಮಿಗೆ ಪೂರಕವಾದ ಭೌಗೋಳಿಕ ಲಕ್ಷಣಗಳಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಈಗ ಗುರುತಿಸಲಾದ ಜಾಗವು ಫಲ್ಗುಣಿ ನದಿಯ ಬದಿಯಲ್ಲಿದೆ. ಜತೆಗೆ ಕೋಸ್ಟ್‌ಗಾರ್ಡ್‌ನ ಮೂರನೇ ಜಿಲ್ಲಾ ಪ್ರಧಾನ ಕಚೇರಿ ಕೂಡ ಪಣಂಬೂರಿನಲ್ಲಿದೆ. ಬಂದರು, ವಿಮಾನ ನಿಲ್ದಾಣವೂ ಹತ್ತಿರದಲ್ಲಿದ್ದು, ಅಕಾಡೆಮಿ ಸ್ಥಾಪನೆಗೆ ಸೂಕ್ತ ಸ್ಥಳ.

ವಿಸ್ತೃತ ತರಬೇತಿ ಅವಕಾಶ

ಇಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೌಕಾ ತರಬೇತಿ, ಮಾಲಿನ್ಯ ಸ್ಪಂದನೆ, ಶೋಧ ಮತ್ತು ಪತ್ತೆ, ವಿವಿಧ ರೀತಿಯ ಕಾರ್ಯಾಚರಣೆ, ಸಾಗರೋತ್ತರ ನಿಯಮಾವಳಿಗಳು, ಕಡಲ್ಗಳ್ಳರ ನಿಯಂತ್ರಣ ಇತ್ಯಾದಿ ತರಬೇತಿ ನೀಡಲಾಗುವುದು. ಇದಕ್ಕಾಗಿ ಹಲವು ರೀತಿಯ ನೌಕೆಗಳು, ವಿಮಾನಗಳು ಕೂಡ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ತರಬೇತಿಗೆ ಅಕಾಡೆಮಿಯೊಳಗೇ 9 ವಿವಿಧ ಸ್ಕೂಲ್‌ಗ‌ಳು ಇರುತ್ತವೆ. ಸುಮಾರು 650ರಷ್ಟು ಪ್ರಶಿಕ್ಷಣಾರ್ಥಿಗಳನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಇದರಲ್ಲಿ ವಿದೇಶಿ ವಿದ್ಯಾರ್ಥಿಗಳೂ ಇರುತ್ತಾರೆ ಎನ್ನುವುದು ವಿಶೇಷ.

ಕೇರಳಕ್ಕೆ ಹೋಗುವುದು ತಪ್ಪಿತ್ತು!

ಕೇರಳದ ಕಣ್ಣೂರು ಜಿಲ್ಲೆಯ ಆಯಿಕಲ್‌ ಸಮೀಪದ ಇರಿನಾವು ಸಮುದ್ರ ತೀರದ ವಳಪಟ್ಟಣಂ ನದಿಯ ಬಳಿ ಸ್ಥಾಪನೆಗೆ ಕೇರಳದಿಂದ ಲಾಬಿ ನಡೆದಿತ್ತು. ಆದರೆ ಕಳೆದ ಅವಧಿಯಲ್ಲಿ ಕೇಂದ್ರದ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಭಾರತೀಯ ತಟರಕ್ಷಣ ಪಡೆಯ ಡೈರೆಕ್ಟರ್‌ ಜನರಲ್‌ ಜತೆ 2017ರ ಡಿಸೆಂಬರ್‌ ತಿಂಗಳಲ್ಲಿ ಮಂಗಳೂರಿನ ಕೆಂಜಾರಿಗೆ ಭೇಟಿ ನೀಡಿ ಅಕಾಡೆಮಿ ನಿರ್ಮಾಣಕ್ಕೆ ಗುರುತಿಸಿದ್ದ ಪ್ರದೇಶವನ್ನು ಪರೀಶೀಲಿಸಿ ಶೀಘ್ರ ಅಕಾಡೆಮಿ ಸ್ಥಾಪಿಸುವ ಭರವಸೆ ನೀಡಿದ್ದರು. ಹೀಗಾಗಿ ಅಕಾಡೆಮಿಯು ಕೇರಳದ ಪಾಲಾಗದೆ ಮಂಗಳೂರಿಗೆ ದಕ್ಕಿದೆ ಎಂದು ತಿಳಿದುಬಂದಿದೆ.

Join Whatsapp