ನವದೆಹಲಿ: ಖಾಸಗಿಯವರಿಗೆ ಅವಕಾಶ ಮಾಡಿಕೊಡಲು ‘ಲ್ಯಾಟರಲ್ ಎಂಟ್ರಿ’ಯ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಕೇಂದ್ರದ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಬರೆದ ಪತ್ರದಲ್ಲಿ ‘ಲ್ಯಾಟರಲ್ ಎಂಟ್ರಿ’ ಸಂಬಂಧಿತ ಇತ್ತೀಚಿನ ಜಾಹೀರಾತನ್ನು ರದ್ದು ಮಾಡುವಂತೆ ನಿರ್ದೇಶನ ನೀಡಿದ್ದರು.
‘ನಾವು ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯ ರಕ್ಷಣೆ ಮಾಡುತ್ತೇವೆ. ‘ಲ್ಯಾಟರಲ್ ಎಂಟ್ರಿ’ಯಂತಹ ಬಿಜೆಪಿಯ ಸಂಚನ್ನು ವಿಫಲಗೊಳಿಸುತ್ತೇವೆ’ ಎಂದು ರಾಹುಲ್ ಹೇಳಿದ್ದಾರೆ.