ಮಂಗಳೂರು | ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ನೈಜ ಆಶಯ ಈಡೇರಿದೆ: ದಿನೇಶ್ ಗುಂಡೂರಾವ್

Prasthutha|

ಮಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ನೈಜ ಆಶಯಗಳನ್ನು ಈಡೇರಿಸಿ ಸುಖಿ ರಾಜ್ಯ ನಿರ್ಮಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

- Advertisement -


ಶುಕ್ರವಾರ ನಗರದ ನೆಹರು ಮೈದಾನದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಭಾರತವು ಇಂದು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗುವಲ್ಲಿ ನಮ್ಮ ಸಂವಿಧಾನದ ಪಾತ್ರ ಮಹತ್ವದ್ದು. ದೇಶಕ್ಕೆ ಇಂತಹ ಬಲಿಷ್ಠ ವಿಶ್ವಶ್ರೇಷ್ಠ ಸಂವಿಧಾನ ರೂಪಿಸುವಲ್ಲಿ ರಾಷ್ಟ್ರದ ಅಗ್ರಗಣ್ಯ ಚಿಂತಕರು, ತಜ್ಞರ ಪ್ರಯತ್ನ ಕಾರಣ. ಡಾ. ಬಿ.ಆರ್ ಅಂಬೇಡ್ಕರರ ಅವಿರತ ಶ್ರಮ ಇಂತಹ ಸಂವಿಧಾನದ ರಚನೆಗೆ ಕಾರಣ. ಭಾರತವು ಇಂದು ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಗೆ ಸೇರಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತ ಮುನ್ನುಗ್ಗುತ್ತಿದೆ. ಕರ್ನಾಟಕ ಸರ್ಕಾರವು ಪ್ರಜಾಪ್ರಭುತ್ವದ ಆಶಯದಂತೆ ಸರ್ಕಾರದ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ನೈಜ ಆಶಯಗಳನ್ನು ಈಡೇರಿಸಿ ಸುಖಿ ರಾಜ್ಯ ನಿರ್ಮಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

- Advertisement -

ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಬದುಕಿನಲ್ಲಿ ಕ್ರಾಂತಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 2.80 ಕೋಟಿ ಮಹಿಳೆಯರು ಈ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿದ್ದು, 91.15 ಮೊತ್ತದ ಟಿಕೆಟ್ ವೆಚ್ಚವನ್ನು ಸರ್ಕಾರವು ಕೆ.ಎಸ್.ಆರ್.ಟಿ.ಸಿ ಗೆ ಪಾವತಿಸಿದೆ. ಅನ್ನಭಾಗ್ಯ ಯೋಜನೆಯ ಮೂಲಕ ‘ಹಸಿವು’ ಮುಕ್ತ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯದ ಜನತೆಗೆ 5 ಕೆ.ಜಿ ಅಕ್ಕಿಯ ಜೊತೆಗೆ ಉಳಿದ 5 ಕೆ.ಜಿ ಅಕ್ಕಿಯ ಬದಲಾಗಿ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2023 ರ ಜುಲೈನಿಂದ ಡಿಸೆಂಬರ್’ವರೆಗೆ 321 ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್’ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023 ರ ಆಗಸ್ಟ್’ನಿಂದ ಡಿಸೆಂಬರ್’ವರೆಗೆ 39.28 ಲಕ್ಷ ಶೂನ್ಯ ವಿದ್ಯುತ್ ಬಿಲ್ ನೀಡಲಾಗಿದ್ದು, ಇದರ ಮೊತ್ತ 183 ಕೋಟಿ ರೂಪಾಯಿಗಳನ್ನು ಮೆಸ್ಕಾಂಗೆ ಪಾವತಿಸಲಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ‘ಗೃಹಲಕ್ಷ್ಮಿ’ ಯೋಜನೆಯ ಮೂಲಕ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಜನವರಿ 15ರ ವರೆಗೆ 3.49 ಲಕ್ಷ ಮಹಿಳಾ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಲಾಗಿದೆ ಎಂದರು.

ರಾಜ್ಯದ ನಿರುದ್ಯೋಗಿ ಯುವಕರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ‘ಯುವನಿಧಿ’ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದು ಜನವರಿ ತಿಂಗಳಿನಿಂದ ಪದವೀಧರರಿಗೆ 3000 ರೂಪಾಯಿ ಮತ್ತು ಡಿಪ್ಲೊಮೊ ಪದವೀಧರರಿಗೆ 1500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಇದುವರೆಗೂ ಈ ಯೋಜನೆಗೆ 2666 ಮಂದಿ ಯುವಕರು ನೋಂದಾಯಿಸಿಕೊಂಡಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಲ್ಲೆಗೆ 53 ಹೊಸ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ ತಾಲೂಕಿನ 24 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗಾಗಿ 245 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶವು ಗಣತಂತ್ರಹೊಂದಿ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ಪೂರೈಸಿದ ಸವಿನೆನಪಿಗಾಗಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸಂವಿಧಾನ ಜಾಗೃತಿ ಜಾಥಾ’ ಆಯೋಜಿಸಲಾಗುತ್ತಿದ್ದು ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಈ ಜಾಥಾ ತೆರಳಲಿದೆ. ನಮ್ಮ ಹೆಮ್ಮೆಯ ಗಣರಾಜ್ಯವನ್ನು ಯಶಸ್ವಿಗೊಳಿಸಲು ದೇಶದ ಸರ್ವರೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕೆಂದು ನಿವೇದಿಸಿಕೊಳ್ಳುತ್ತ ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದರು.



Join Whatsapp