ದೇಶಕ್ಕೆ ಎದುರಾಗಿರುವ ಸಂಕಷ್ಟ ಎದುರಿಸಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: “ನಮ್ಮ ದೇಶಕ್ಕೆ ಎದುರಾಗಿರುವ ಸಂಕಷ್ಟವನ್ನು ಎದುರಿಸಿ, ನಾವೆಲ್ಲ ಶಕ್ತಿ ತುಂಬಬೇಕು. ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಬೇಕಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

- Advertisement -

ಕೆಪಿಸಿಸಿ ಕಚೇರಿಯಲ್ಲಿ 139 ನೇ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಗುರುವಾರ ಮಾತನಾಡಿದ ಅವರು,“ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಇತಿಹಾಸ, ಅಭಿವೃದ್ಧಿ ಪರ್ವ ಬರೆದದ್ದು ನಮ್ಮ ಹೆಗ್ಗಳಿಕೆ. ಅನ್ಯರು ಏನು ಬೇಕಾದರೂ ಹೇಳಬಹುದು, ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಅದನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದದ್ದು ಕಾಂಗ್ರೆಸ್. ನಿರ್ಲಕ್ಷಿತ ಸಮುದಾಯಕ್ಕೆ ಧ್ವನಿ, ವಿದ್ಯಾಭ್ಯಾಸ, ಆರ್ಥಿಕ ಶಕ್ತಿ ಕೊಟ್ಟದ್ದು, ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ದೇಶವನ್ನು ಅಭಿವೃದ್ದಿಶೀಲವನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಲು ಹೆಮ್ಮೆಯಾಗುತ್ತದೆ. ಮಹಾತ್ಮ ಗಾಂಧಿ, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಇಂದಿರಾಗಾಂಧಿ ಸೇರಿದಂತೆ ಸಾವಿರಾರು ಜನ ಈ ದೇಶಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಸುಮಾರು 60 ಸಾವಿರ ಕೋಟಿ ಹಣ ನೇರವಾಗಿ ಜನರಿಗೆ ಸೇರಿದೆ. ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಇಡೀ ದೇಶಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿದ್ದೇವೆ ಎಂದರು.

ಹಣದುಬ್ಬರದ ಹೊತ್ತಿನಲ್ಲಿ ಐದು ಗ್ಯಾರಂಟಿಗಳನ್ನು ಕೊಟ್ಟು ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಚಿಹ್ನೆ ಹಸ್ತದಲ್ಲಿ ಇರುವ ಐದು ಬೆರಳಿನಂತೆ, ಚುನಾವಣೆಯಲ್ಲಿ ಐದು ಗ್ಯಾರಂಟಿಗಳು ಇರಬೇಕು ಎಂದು ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ತೀರ್ಮಾನ ಮಾಡಲಾಯಿತು. ಬರುವ ಜ.10 ರಂದು ಕೇಂದ್ರ ನಾಯಕರು ಹಾಗೂ ರಾಜ್ಯದ ಎಲ್ಲ ಶಾಸಕರನ್ನು ಒಳಗೊಂಡು ಲೋಕಸಭೆ ಚುನಾವಣೆ ತಯಾರಿಗೆ ಸಭೆ ನಡೆಸಲಾಗುವುದು. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವುದರ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುವುದು. ಕಾರ್ಯಕರ್ತರು ಮನೆ, ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕು. ಆರ್ ಎಸ್ಎಸ್ ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ. ಆದರೆ ಬಿಜೆಪಿ, ಆರ್ ಎಸ್ಎಸ್ ನವರನ್ನು ಬಳಸಿಕೊಂಡು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದರೆ, ನಾವು ಜನರ ಬದುಕಿನ ಬಗ್ಗೆ ರಾಜಕಾರಣ ಮಾಡುತ್ತಿದ್ದೇವೆ. ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಪ್ರತಿಯೊಂದು ಕುಟುಂಬದ ಹೆಣ್ಣುಮಕ್ಕಳು ನಮ್ಮ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕಾರಣದಲ್ಲಿ ಇಂತಹ ಅವಕಾಶ, ಭಾಗ್ಯ ದೊರಕಿರಲಿಲ್ಲ. ನುಡಿದಂತೆ ನಡೆದಿದ್ದೇವೆ, ಇದನ್ನು ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕು. ಪ್ರತಿಯೊಂದು ವಾರ್ಡ್, ಪಂಚಾಯಿತಿಯಲ್ಲಿ ಆಶ್ರಯ ಸಮಿತಿ ಸೇರಿದಂತೆ ಅನೇಕ ಸಮಿತಿಗಳಿದ್ದು, ಇಲ್ಲೆಲ್ಲಾ ಕಾರ್ಯಕರ್ತರಿಗೆ ಶೀಘ್ರ ಸ್ಥಾನಗಳನ್ನು ಕಲ್ಪಿಸಲಾಗುವುದು ಎಂದರು.

- Advertisement -

ಎರಡು ವರ್ಷಗಳಿಗೆ ಒಮ್ಮೆ ಬದಲಾವಣೆ ಮಾಡಬೇಕು ಎನ್ನುವ ಆಲೋಚನೆ ನಮ್ಮಲ್ಲಿದೆ. ಕಾರ್ಯಕರ್ತರ ಕೆಲಸಗಳ ಬಗ್ಗೆ ನಮಗೆ ಅರಿವಿದೆ, ಅವರಿಗೆ ನ್ಯಾಯ ಒದಗಿಸಲಾಗುವುದು. ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ. ಆದರೆ ಕಾರ್ಯಕರ್ತರ ತ್ಯಾಗವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಯಾವುದೇ ಸಮಿತಿ ರಚನೆ ಮಾಡಿದರೂ ಅದರಲ್ಲಿ ಸೇವಾದಳ, ಮಹಿಳಾ, ಯುವ, ವಿದ್ಯಾರ್ಥಿ ಮತ್ತು ಎಲ್ಲಾ ಸಮುದಾಯಗಳ ಪ್ರತಿನಿಧಿಗಳು ಇರಬೇಕು ಮತ್ತು ಎಲ್ಲರಿಗೂ ಸಮಾನ ರೀತಿಯ ಅವಕಾಶ ದೊರೆಯಬೇಕು ಎನ್ನುವುದು ಪಕ್ಷದ ಆಶಯ. ಕಾರ್ಯಕರ್ತರಿಗೆ ಪಕ್ಷ ಏನು ಕೊಟ್ಟಿದೆ ಎಂದು ಯಾರಾದರೂ ಕೇಳಿದಾಗ, ನಮ್ಮ ಪಕ್ಷ ನಮಗೆ ಉತ್ತಮ ಸ್ಥಾನಮಾನ ನೀಡಿದೆ ಎಂದು ಹೇಳುವಂತಾಗಬೇಕು. ಕರ್ನಾಟಕ ಮತ್ತು ತೆಲಂಗಾಣದ ಪ್ರಭಾವ ಇಡೀ ದೇಶಕ್ಕೆ ತಲುಪಿದೆ. ಮಿಕ್ಕ ಮೂರು ರಾಜ್ಯಗಳ ಸೋಲಿನ ಕಾರಣಗಳ ಬಗ್ಗೆ ಮತ್ತೊಮ್ಮೆ ತಿಳಿಸುತ್ತೇನೆ. ಕಾರ್ಯಕರ್ತರು ವೈಯಕ್ತಿಕವಾಗಿ ಅಧಿಕಾರ ಸಿಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವುದು ಬೇಡ, ಪಕ್ಷ ಅಧಿಕಾರದಲ್ಲಿ ಇರುವುದಕ್ಕೆ ಸಂತೋಷಪಡಬೇಕು. ಒಂದಲ್ಲ ಒಂದು ದಿನ ಅವಕಾಶ ದೊರೆಯುತ್ತದೆ. ಕಾಂಗ್ರೆಸ್ ಪಕ್ಷ ದೇಣಿಗೆ ಸಂಗ್ರಹ ಮಾಡುತ್ತಿದ್ದು, ಪೇಟಿಎಂ ಸೇರಿದಂತೆ ಇತರೇ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ದೇಣಿಗೆ ನೀಡಿ, ಪಕ್ಷದ ಬಲವರ್ದನೆಗೆ ಸಹಕರಿಸಬೇಕು ಎಂದರು.

 ಮತ್ತೊಮ್ಮೆ ಗ್ಯಾರಂಟಿ ಕವನ ವಾಚಿಸಿದ ಡಿಸಿಎಂ

ಐದನೇ ಗ್ಯಾರಂಟಿ ಯೋಜನೆ ಯುವನಿಧಿ ನೋಂದಣಿ ಉದ್ಘಾಟನಾ ಸಮಾರಂಭದಲ್ಲಿ ವಾಚಿಸಿ, ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದ್ದ ಕವನವನ್ನು ಡಿಸಿಎಂ ಮತ್ತೊಮ್ಮೆ ವಾಚಿಸಿದರು. ಐದು ಬೆರಳು ಸೇರಿ ಒಂದು ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು, ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಸಮೃದ್ಧವಾಯಿತು, ಕರ್ನಾಟಕ ಪ್ರಬುದ್ಧವಾಯಿತು.

Join Whatsapp