ಕೇಜ್ರಿವಾಲ್, ಸೊರೆ‌ನ್ ರೀತಿ ಸಿದ್ದರಾಮಯ್ಯ ಬಂಧನಕ್ಕೆ‌ ಸಂಚು: ಮಂಜುನಾಥ್ ಭಂಡಾರಿ

Prasthutha|

►ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ

- Advertisement -

ಮಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡುವ ಬಗ್ಗೆ ರಾಜ್ಯಪಾಲರು ಸಿಎಂ‌ ಸಿದ್ದರಾಮಯ್ಯರವರಿಗೆ ನೋಟಿಸ್ ನೀಡಿರುವುದಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ‌ ಆಕ್ಷೇಪ‌ ವ್ಯಕ್ತಪಡಿಸಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಜಾರ್ಖಂಡ್ ಸಿಎಂ‌ ಹೇಮಂತ್‌ ಸೊರೆನ್ ಅವರನ್ನು ಪ್ರಕರಣಗಳಲ್ಲಿ‌ ಸಿಲುಕಿಸಿ ಜೈಲಿಗೆ ತಳ್ಳಿದ ರೀತಿಯಲ್ಲಿ‌ ಸಿಎಂ‌ ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಜೈಲಿಗೆ ಕಳಿಸಲು ಸಂಚು ನಡೆಯುತ್ತಿದೆ ಎಂದು ಅವರು ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ, ಅದಕ್ಕಾಗಿ ಆರೋಪಿಗಳಿಂದ ಹೇಳಿಕೆ ಕೊಡಿಸಿ ಸಿಎಂ ಅವರನ್ನು ಸಿಲುಕಿಸಿ ಸರಕಾರವನ್ನು‌ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ ಎಂದರು. ಬಿಜೆಪಿ ಸರಕಾರದ ಅವಧಿಯಲ್ಲಿ ಅಷ್ಟು ಹಗರಣಗಳು ನಡೆದರೂ ಏಕೆ ತನಿಖೆಗೆ ನೀಡಿರಲಿಲ್ಲ, ಈಗ ಸಿಎಂ ಅವರಿಗೆ ನೋಟಿಸ್ ಕೊಟ್ಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

- Advertisement -

ಬಿಜೆಪಿಯವರು ಮುಡಾ ಪ್ರಕರಣಕ್ಕೆ‌ ಸಂಬಂಧಿಸಿ ಮೈಸೂರಿಗೆ ಪಾದಯಾತ್ರೆ ಮಾಡುವ ಬದಲು ರಾಜ್ಯದ ಪಾಲು ಕೇಳಲು ದೆಹಲಿ ಪಾದಯಾತ್ರೆ ಮಾಡಲಿ ಎಂದರು.
ಪಾದಯಾತ್ರೆ ಸಂಬಂಧ ಕೇಂದ್ರ ‌ಸಚಿವ ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಂಡಾರಿ, ‘ಬಿಜೆಪಿ-ಜೆಡಿಎಸ್ ಮದುವೆಯಾಗಿತ್ತು, ಆದರೆ ಗಂಡು ಮುನಿಸಿಕೊಂಡಿದ್ದಾರೆ, ಸಂಸಾರಕ್ಕೆ ವಿಷ ಹಾಕಿರುವುದನ್ನು ತಿಳಿಸಿದ್ದಾರೆ, ಕುಮಾರಸ್ವಾಮಿಯವರ ಮನದಾಳದ‌ ಮಾತು ಹೊರಬಂದಿದ್ದು ಮುಂದಿನ‌ ದಿನಗಳಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದರು.

ಲೋಕಸಭೆ ಕಲಾಪದಲ್ಲಿ ರಾಹುಲ್ ಗಾಂಧಿ ಜಾತಿ ಬಗ್ಗೆ ಪ್ರಶ್ನಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಮಂಜುನಾಥ್ ಭಂಡಾರಿ, ಧರ್ಮದಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಅಯೋಧ್ಯೆ ತಕ್ಕಪಾಠ ಕಲಿಸಿದೆ. ಈಗ ಅವರು ಜಾತಿ ಹೆಸರಲ್ಲಿ ರಾಜಕೀ ಮಾಡಲು ಬಂದಿದ್ದಾರೆ. ಅನುರಾಗ್ ಠಾಕೂರ್ ಹೇಳಿಕೆಗೆ ಬೆಂಬಲಿಸಿರುವ ಪ್ರಧಾನಿ ಮೋದಿ, ಜಾತಿಯ ಆಧಾರದಲ್ಲಿ ದೇಶ ಕಟ್ಟುತ್ತಾರಾ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ರೌಡಿಶೀಟರ್ ಪುನೀತ್ ಕೆರೆಹಳ್ಳಿಗೆ ಬೆಂಬಲಿಸಿರುವ ಶಾಸಕ ಹರೀಶ್ ಪೂಂಜ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಾರನ್ನು ಬೆಂಬಲಿಸಬೇಕು ಎಂಬ ಪ್ರಜ್ಞೆ ಶಾಸಕರಿಗೆ ಇರಬೇಕು, ಈ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಏನು ಸಂದೇಶ ನೀಡುತ್ತೀರಿ ಎಂದರು.

ದ.ಕ ಮತ್ತು ಉಡುಪಿ ಜಿಲ್ಲೆಯ ಮಳೆ ಮತ್ತು ನೆರೆ ಹಾನಿಗಳಿಗೆ ಪರಿಹಾರ ಒದಗಿಸಲು ತಾನು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಪೂಜಾರಿ, ಎಂ.ಎಸ್ ಮಹಮ್ಮದ್,
ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಕೆ. ಅಶ್ರಫ್, ಮಹಾಬಲ ಮಾರ್ಲ ಸೇರಿ‌ ಇತರೆ ಮುಖಂಡರು ಉಪಸ್ಥಿತರಿದ್ದರು.



Join Whatsapp