ಚಂಡೀಗಢ: ಆರಂಭದಿಂದಲೂ ಕ್ರೀಡಾಪಟುಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಕಳೆದ ವರ್ಷ ಕುಸ್ತಿಪಟು ಗಳು ಪ್ರತಿಭಟನೆ ನಡೆಸಿದರು ಎಂಬುದೀಗ ಸಾಬೀತಾದಂತಾಗಿದೆ ಎಂದು ಹರಿಯಾಣದ ಬಿಜೆಪಿ ನಾಯಕ ಅನಿಲ್ ವಿಜ್ ಹೇಳಿದ್ದಾರೆ.
ಕುಸ್ತಿಪಟುಗಳಾದ ವಿನೇಶ್ ಫೋಗಾಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿ, ವಿನೇಶ್ ದೇಶದ ಪುತ್ರಿಯಾಗುವ ಬದಲು ಕಾಂಗ್ರೆಸ್ ನ ಪುತ್ರಿಯಾಗಲು ಹೊರಟರೆ ನಮ್ಮಿಂದ ಯಾಕೆ ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ವಿನೇಶ್, ಬಜರಂಗ್ ಕಾಂಗ್ರೆಸ್ ಸೇರ್ಪಡೆ ಕುರಿತು ಉತ್ತರ ಪ್ರದೇಶದ ಗೋಂಡಾದಲ್ಲಿ ಪ್ರತಿಕ್ರಿಯಿಸಿರುವ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್, ಈ ಕುರಿತು ನಾನು ಈಗ ಹೆಚ್ಚೇನೂ ಹೇಳಬೇಕಿಲ್ಲ. ನನ್ನ ವಿರುದ್ಧ ಮಹಿಳಾ ಕುಸ್ತಿಪಟುಗಳು ಆರೋಪ ಮಾಡಿದಾಗ, ಇದೊಂದು ಸಂಚು ಎಂದು ಹೇಳಿದ್ದೆ. ಹರಿಯಾಣದ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಹೂಡಾ ಮತ್ತು ಭೂಪೀಂದರ್ ಹೂಡಾ ನನ್ನ ವಿರುದ್ಧ ಸಂಚು ರೂಪಿಸಿದ್ದರು. ಕಳೆದ ವರ್ಷ ನಾನು ಹೇಳಿದ್ದೆನೋ ಅದಕ್ಕೆ ಈಗಲೂ ಬದ್ಧ. ಅದೇ ಮಾತನ್ನು ಇವತ್ತು ನಾನು ಹೇಳಬೇಕೆಂದು ಈ ದೇಶ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.