ಬೆಂಗಳೂರು: ಲಖಿಂಪುರ ಖೇರಿಯಲ್ಲಿ ಹತ್ಯೆಯಾದ ರೈತರ ಸಂತ್ರಸ್ತ ಕುಟುಂಬಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಪ್ಪುಗೆಯ ಸಾಂತ್ವನ ನೀಡುತ್ತಿರುವ ಫೋಟೋವನ್ನು ಟ್ವೀಟ್ ನಲ್ಲಿ ಲಗತ್ತಿಸಿರುವ ಕರ್ನಾಟಕ ಕಾಂಗ್ರೆಸ್, ಇದನ್ನು ‘ರಾಜಕೀಯ’ ಎನ್ನುವುದಾದರೆ ಎನ್ನಲಿ. ದೇಶಕ್ಕೆ ಬೇಕಿರುವುದು ಪ್ರೇಮದ ರಾಜಕೀಯವೇ ಹೊರತು ದ್ವೇಷದ ರಾಜಕೀಯವಲ್ಲ ಎಂದು ಕುಟುಕಿದೆ.
ದೇಶಕ್ಕೆ ಬೇಕಿರುವುದು ಆಪ್ತತೆಯ ರಾಜಕಾರಣವೇ ಹೊರತು ರಕ್ತದ ರಾಜಕೀಯವಲ್ಲ. ನೊಂದವರ ಎದೆಗೆ ಧೈರ್ಯ ತುಂಬುವುದಾದರೆ, ಬಸವಳಿದವರ ನೋವಿಗೆ ದನಿಯಾಗುವುದಾದರೆ ಅಂತಹ ರಾಜಕೀಯಕ್ಕೇ ನಾವಿರುವುದು. ‘ರಾಜಕೀಯ’ದ ನೈಜ ಆಶಯವೂ ಅದೇ ಎಂದು ಟ್ವೀಟ್ ಮಾಡಿದೆ.
ಈ ಸಂತೈಸುವಿಕೆಯ ಅಪ್ಪುಗೆ, ಹೃದಯಸ್ಪರ್ಶಿ ಸಾಂತ್ವನವೇ ಬಿಜೆಪಿಯನ್ನು ಭಯಪಡಿಸುತ್ತದೆ, ಬೆಚ್ಚಿಬೀಳಿಸುತ್ತದೆ ಎಂಬುದು ಬಿಜೆಪಿಯ ಅಪರಾಧಿ ಪ್ರಜ್ಞೆಗೆ ನಿದರ್ಶನ. ಗೂಂಡಾರಾಜ್ ಆಡಳಿತದ ಅಡೆತಡೆಗಳನ್ನು ಜಯಿಸಿಕೊಂಡು ರಾಹುಲ್ ಮತ್ತು ಪ್ರಿಯಾಂಕಾ ಅವರು ಲಖೀಂಪುರಕ್ಕೆ ತೆರಳಿ ಮೃತ ರೈತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.