ಪೇ-ಸಿಎಂ ಭಿತ್ತಿ ಪತ್ರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ: ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ

Prasthutha|

►ಬಿಜೆಪಿಯವರು ಇಡಿ, ಸಿಬಿಐ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವ ರಣಹೇಡಿಗಳು: ಬಿ.ಕೆ. ಹರಿಪ್ರಸಾದ್

- Advertisement -


ಬೆಂಗಳೂರು: ಶೇಕಡಾ 40ರಷ್ಟು ಕಮಿಷನ್ ವಿರೋಧಿಸಿ ಕಾಂಗ್ರೆಸ್ ನಡೆಸಿದ ಪೇ-ಸಿಎಂ ಭಿತ್ತಿ ಪತ್ರಗಳ ಅಭಿಯಾನದ ಹೆಸರಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದನ್ನು ವಿರೋಧಿಸಿ ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಕಲಾಪವನ್ನು ಮುಂದೂಡಬೇಕಾಯಿತು.


ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಪೇ ಸಿಎಂ ವಿವಾದವನ್ನು ಪ್ರಸ್ತಾಪಿಸಿದರು. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುತ್ತಿದೆ. ಮಧ್ಯ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ನುಗ್ಗಿ ಮಹಿಳೆಯರು ಮಕ್ಕಳ ಮುಂದೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರೇನು ಮಾಡಬಾರದ್ದನ್ನು ಮಾಡಿದ್ದಾರಾ, ದೇಶ ದ್ರೋಹದ ಕೆಲಸ ಮಾಡಿದ್ದಾರೆಯೇ ಎಂದು ಆಕ್ರೋಶವ್ಯಕ್ತ ಪಡಿಸಿದರು. ಕಾಂಗ್ರೆಸ್ ನಾಯಕರ ವಿರುದ್ಧ ಅಂಟಿಸಲಾಗಿದ್ದ ಭಿತ್ತಿ ಪತ್ರಗಳ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಉದಾಸಿನ ಮಾಡಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
ಈ ವೇಳೆ ಗೃಹ ಸಚಿವ ಅರಗಜ್ಞಾನೇಂದ್ರ ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿದವರ ವಿರುದ್ಧ ಪೊಲೀಸರು ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಾರೆ. ಕಾಂಗ್ರೆಸಿಗರು ತಮಗಾಗಿ ಪ್ರತ್ಯೇಕ ಕಾನೂನು ಬೇಕು ಎಂದರೆ ಅದು ಇಲ್ಲಿ ನಡೆಯಲ್ಲ ಎಂದು ಹೇಳಿದರು.

- Advertisement -


ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಕಡೆಗಳಲ್ಲಿ ಸದಸ್ಯರು ಎದ್ದು ನಿಂತು ಏರಿದ ಧ್ವನಿಯಲ್ಲಿ ಗದ್ದಲವೆಬ್ಬಿಸಿದರು. ಈ ವೇಳೆ ಪರಸ್ಪರ ದೋಷಾರೋಪಣೆಗಳು ಕೇಳಿ ಬಂದವು. ಎಲ್ಲರೂ ಕೂಗಾಡಿದ್ದರಿಂದ ಯಾರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಸಭಾಪತಿ ಅವರು ಸದನವನ್ನು ಸರಿ ದಾರಿಗೆ ತರಲು ಯತ್ನಿಸಿದರು. ಪ್ರತಿಪಕ್ಷದ ನಾಯಕರು ಏನು ಹೇಳಬೇಕು ಎಂಬ ಬಗ್ಗೆ ಒಂದು ನೋಟಿಸ್ ಕೊಡಿ, ಚರ್ಚೆಗೆ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು.
ನಿನ್ನೆ ಬಿಜೆಪಿಯವರು ವಕ್ಫ್ ಆಸ್ತಿ ಒತ್ತುವರಿ ಕುರಿತು ಅನ್ವರ್ ಮಾಣಿಪಾಡಿ ವರದಿ ಮಂಡನೆಗೆ ಒತ್ತಾಯಿಸುವ ವೇಳೆಯಲ್ಲಿ ನೋಟಿಸ್ ಕೊಟ್ಟಿರಲಿಲ್ಲ ಎಂದು ಹರಿಪ್ರಸಾದ್ ಪ್ರತ್ಯುತ್ತರಿಸಿದರು. ಅದಕ್ಕಾಗಿಯೇ ನಾನು ನಿನ್ನೆ ಅವರಿಗೆ ಅವಕಾಶ ನೀಡಲಿಲ್ಲ ಎಂದು ಸಭಾಪತಿ ಸ್ಪಷ್ಟನೆ ನೀಡಿದರು.


ಆಡಳಿತ ಪಕ್ಷದ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ, ಇದು ಗಂಭೀರ ಸ್ವರೂಪದ ಅಪರಾಧ, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇಲ್ಲಿಗೆ ಚರ್ಚೆಗೆ ಅವಕಾಶ ನೀಡಬಾರದು ಎಂದರು.
ಬಿಜೆಪಿ ಸದಸ್ಯೆ ತೇಜೆಸ್ವಿನಿ, ಮುಖ್ಯಮಂತ್ರಿಯವರು ಸೌಜನ್ಯವನ್ನು ದೌರ್ಬಲ್ಯ ಎಂದು ಭಾವಿಸಿದಂತಿದೆ. ಮುಖ್ಯಮಂತ್ರಿ ಹುದ್ದೆಯನ್ನು ಎಲ್ಲರೂ ಗೌರವದಿಂದ ಕಾಣಬೇಕು. ಕಾಂಗ್ರೆಸಿಗರಿಗೆ ಎಂದು ಪ್ರತ್ಯೇಕ ಮುಖ್ಯಮಂತ್ರಿ ಇದ್ದಾರೆಯೇ ಎಂದು ಪ್ರಶ್ನಿಸಿದರು.
ಪೇ ಸಿಎಂ ಭಿತ್ತಿಪತ್ರಗಳನ್ನು ಅಂಟಿಸಿರುವುದು ಹೇಡಿತನದ ಕೃತ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿ ಕಿಡಿಕಾರಿದಾಗ, ಹರಿಪ್ರಸಾದ್ ಅವರು, ನಿಮ್ಮದೇನು ಶೂರರ ಧೀರರ ಕೃತ್ಯವೇ, ನಿಮ್ಮವರೂ ಕಾಂಗ್ರೆಸ್ ವಿರುದ್ಧ ಭಿತ್ತಿ ಪತ್ರ ಅಂಟಿಸಿದ್ದಾರೆ ಎಂದು ತಿರುಗೇಟು ನೀಡಿದ್ದಲ್ಲದೆ, ಬಿಜೆಪಿಯವರು ಇಡಿ, ಸಿಬಿಐ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವ ರಣ ಹೇಡಿಗಳು ಎಂದು ಕಿಡಿಕಾರಿದರು.
ಈ ನಡುವೆ ಕಾಂಗ್ರೆಸ್ ಸದಸ್ಯರು ಸಭಾಪತಿ ಅವರ ಮುಂದಿನ ಭಾವಿಗೆ ಇಳಿದು ಧರಣಿ ಆರಂಭಿಸಿದರು. ಧರಣಿಯಲ್ಲೇ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ಗೆ ಧಿಕ್ಕಾರ ಕೂಗಿದರೆ, ಧರಣಿ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರು ಬಿಜೆಪಿ, ಶೇ.40ರ ಸರ್ಕಾರಕ್ಕೆ ಎಂದು ಧಿಕ್ಕಾರ ಕೂಗಿದರು.


ಪರಸ್ಪರ ಘೋಷಣೆಗಳಿಂದ ಗದ್ದಲ ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು.
ಮಾಸ್ಕ್ ಮೇಲೂ ಶೇ.40:
ಕಾಂಗ್ರೆಸ್ ತನ್ನ ಸದಸ್ಯರಿಗೆ ಸದನದಲ್ಲಿ ಹಾಕಿಕೊಳ್ಳಲು ಮಾಸ್ಕ್ ಹಂಚಿದ್ದು, ಅದರ ಮೇಲೇ ಶೇ.40 ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ ಎಂದು ಬರೆಯಲಾಗಿದೆ. ಈ ಮಾಸ್ಕ್ ಧರಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ.

Join Whatsapp