ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೃತ ಕಾಂಗ್ರೆಸ್ ಕಾರ್ಯಕರ್ತನನ್ನು ಫೂಲ್‌ಚಂದ್ ಎಂದು ಗುರುತಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು, ನಾಮಪತ್ರ ಸಲ್ಲಿಸಿದ ಮೊದಲ ದಿನವೇ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖಾರ್‌ಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಪುರ ನಲ್ದೀಪ್‌ನಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಫೂಲ್‌ಚಂದ್ ಶೇಖ್ ಶುಕ್ರವಾರ (ಜೂ.9) ಸಂಜೆ ರತನ್‌ಪುರದ ನಲ್ದೀಪ್ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಇಸ್ಪೀಟು ಆಡುತ್ತಿದ್ದಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫೂಲ್‌ಚಂದ್‌ನನ್ನು ಕಂದಿ ಉಪ ವಿಭಾಗದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.
ಫೂಲ್ ಚಂದ್ ಕೇರಳದಲ್ಲಿ ವಲಸೆ ಕಾರ್ಮಿಕನಾಗಿದ್ದು, 10 ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ್ದು, ದಾಳಿಕೋರರ ಸುಳಿವು ಪತ್ತೆಹಚ್ಚಲು ಬಲೆ ಬೀಸಿದ್ದಾರೆ.