ಕಾಂಗ್ರೆಸ್‌ ಗೆಲುವು: ಮುಖಭಂಗಕ್ಕೊಳಗಾದ ಬಿಜೆಪಿ– ಜೆಡಿಎಸ್‌

Prasthutha|

ಹಾಸನ: ಇದೇ ಮೊದಲ ಬಾರಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಜೆಡಿಎಸ್‌ ಹಾಗೂ ಬಿಜೆಪಿಗೆ ಮುಖಭಂಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇರುವ ಬಿಜೆಪಿ ಹಾಗೂ ಹಿಂದೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ಗೆ ಈ ಚುನಾವಣೆ ತಕ್ಕ ಪಾಠ ಕಲಿಸಿದೆ. ಯೋಗ ದಿನಕ್ಕೆ ಪ್ರಧಾನಿ ಮೋದಿ ಅವರಿಗೆ ಗೆಲುವಿನ ಉಡುಗೊರೆ ಕೊಡುವಂತೆ ಬಿಜೆಪಿ ಮುಖಂಡರು ಮನವಿ ಮಾಡುತ್ತಿದ್ದರು. ಇದೀಗ ಪ್ರಬುದ್ಧ ಮತದಾರರು ಬಿಜೆಪಿ ವಿರುದ್ಧ ಮತ ಹಾಕುವ ಮೂಲಕ ಒಳ್ಳೆಯ ಉಡುಗೊರೆಯನ್ನೇ ನೀಡಿದ್ದಾರೆ ಎಂದು ಹೇಳಿದರು.

ಡಾಲರ್ ಮೌಲ್ಯ ಕುಸಿದಿದೆ. ಹಣದುಬ್ಬರ ಹೆಚ್ಚಾಗಿದೆ. ನಿರುದ್ಯೋಗ, ಹಸಿವು, ಬಡತನಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ದೇಶಕ್ಕೆ ಸುಭಿಕ್ಷೆ ಕಾಲ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡೀ ದೇಶಕ್ಕೆ ಕೇಡುಗಾಲ ಬಂದಿದೆ  ಹೊರತು ಕಾಂಗ್ರೆಸ್‌ಗೆ ಕೇಡುಗಾಲ ಬಂದಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದರು.

- Advertisement -

ಪ್ರತಿಪಕ್ಷಗಳನ್ನೇ ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ನೀಡುತ್ತಿದ. ಎಐಸಿಸಿ ಕಚೇರಿಯನ್ನೇ ಬಂದ್ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಗ್ನಿಪಥ ಯೋಜನೆಯ ಬಗ್ಗೆ ಚರ್ಚಿಸದೇ ಏಕಾಏಕಿ ಜಾರಿ ಮಾಡಿರುವುದೇ ಇಂದಿನ ಆಕ್ರೋಶಕ್ಕೆ ಕಾರಣ. ಕೂಡಲೇ ಸರ್ವ ಪಕ್ಷದ ಸಭೆ ಕರೆದು, ಅಗ್ನಿಪಥ ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಶಾಸಕರು, ಮುಖಂಡರಲ್ಲಿ ಅಸಮಾಧಾನವಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಕುಟುಂಬದ ನಿರ್ಧಾರವೇ ಆದ್ಯತೆ ಪಡೆಯುತ್ತಿದೆ ಎಂದು ದೂರುತ್ತಿದ್ದಾರೆ. ಹಿರಿಯ ಶಾಸಕರು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.



Join Whatsapp