ಪಂಚರಾಜ್ಯ ಫಲಿತಾಂಶ ಇಂಫ್ಯಾಕ್ಟ್: ಕರ್ನಾಟಕ ಕಾಂಗ್ರೆಸ್ ನ ಗುಂಪುಗಾರಿಕೆ ಶಮನಕ್ಕೆ ಹೈಕಮಾಂಡ್ ಸೂಚನೆ

Prasthutha|

ನವದೆಹಲಿ: ಪಂಚರಾಜ್ಯ ಚುನಾವಣೆಯ ಪೈಕಿ ಪಂಜಾಬ್ ನಲ್ಲಿ ಕಾಂಗ್ರೆಸ್’ನ ಹಿನಾಯ ಸೋಲಿಗೆ ಪಕ್ಷದ ಆಂತರಿಕ ಗುಂಪುಗಾರಿಕೆ ಪ್ರಮುಖ ಕಾರಣವೆಂದು ಮನಗಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಗುಂಪುಗಾರಿಕೆ ಸಮಸ್ಯೆಯ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

- Advertisement -

ಪಂಜಾಬ್ ಕಾಂಗ್ರೆಸ್ ನಲ್ಲಿ ತಲೆದೋರಿದ ಆಂತರಿಕ ಗುಂಪುಗಾರಿಕೆಯೇ ಪಕ್ಷದ ಹೀನಾಯ ಸೋಲಿಗೆ ಪ್ರಮುಖ ಕಾರಣ ಎಂದು ಕಾಂಗ್ರೆಸ್’ನ ಹಲವು ಹಿರಿಯ ನಾಯಕರು ಅರ್ಥೈಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಘೋಷಿಸುವಂತೆ ಹೈಕಮಾಂಡ್’ಗೆ ಒತ್ತಡ ಹೇರಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಸಿದ್ದರಾಮಯ್ಯ ಬಣ ಸೇರಿದಂತೆ ಆಂತರಿಕವಾಗಿ ಪಕ್ಷದಲ್ಲಿ ಬಂಡಾಯ ಭುಗಿದೇಳುವ ಸಾಧ್ಯತೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿಂದ ಈ ಸೂಚನೆ ಹೊರಬಿದ್ದಿದೆ ಎಂದು ಅಂದಾಜಿಸಲಾಗಿದೆ.

- Advertisement -

ಇನ್ನುಳಿದಂತೆ ಪಂಜಾಬ್ ನಲ್ಲಿ ಕೆಲವು ಸಂಸದರು ಮತ್ತು ಶಾಸಕರ ವಿರೋಧದ ಮಧ್ಯೆ ಹೈಕಮಾಂಡ್ ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಿತ್ತು. ಇದರಿಂದ ಬೇಸತ್ತ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಇದು ಪ್ರಮುಖ ಕಾರಣವೆಂದು ಹಿರಿಯ ನಾಯಕರು ಹೈಕಮಾಂಡ್’ಗೆ ದೂರಿದ್ದರು.

ಈ ನಡುವೆ ಜಿಲ್ಲಾ, ಬ್ಲಾಕ್ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಬಾಕಿ ಇದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರು ಪರಸ್ಪರ ಲಾಭಿ ಆರಂಭಿಸಿದ್ದಾರೆ. ಉಭಯ ನಾಯಕರ ಬೆಂಬಲಿಗರ ಈ ಪ್ರಯತ್ನಕ್ಕೆ ಹೈಕಮಾಂಡ್ ತಡೆ ನೀಡಿದೆ. ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಉಭಯ ನಾಯಕರ ಜೊತೆ ಪಕ್ಷದ ಉನ್ನತ ಮಟ್ಟದ ನಾಯಕರು ಸಮಾಲೋಚನೆ ನಡೆಸುವ ಸಾಧ್ಯತೆಯಿದೆ.

ಸದ್ಯ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಮಲ್ಲಯುದ್ಧವು ದೆಹಲಿ ಹೈಕಮಾಂಡ್’ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಉಭಯ ನಾಯಕರ ಭಿನ್ನಮತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ಹೊರಿಸುವ ಕುರಿತು ಹೈಕಮಾಂಡ್ ಚಿಂತನೆ ನಡೆಸಿದೆ. ಆದರೆ ಈ ಪ್ರಸ್ತಾಪವನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಮತ್ತು ಮುನಿಯಪ್ಪ ಬೆಂಬಲಿಸಿದರೂ, ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿನ ಬಗ್ಗೆ ಪಕ್ಷದ ಹೈಕಮಾಂಡ್’ಗೆ ಅರಿವಿದೆ. ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಆಯೋಜಿಸಿ ತನ್ನ ಶಕ್ತಿ ಪ್ರದರ್ಶಿಸಿದ್ದ ಹೊರತಾಗಿಯೂ ಸಿದ್ದರಾಮಯ್ಯ ಅವರು ಜನಮನ್ನಣೆ ಪಡೆದ ನಾಯಕರೆಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥೈಸಿಕೊಂಡಿದೆ.

ಒಟ್ಟಿನಲ್ಲಿ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಕರ್ನಾಟಕದಲ್ಲಿ ಅಧಿಕಾರಕ್ಕೇರಿಸುವ ಸಲುವಾಗಿ ಉಭಯ ನಾಯಕರ ಮಲ್ಲಯುದ್ಧವನ್ನು ಶಮನಗೊಳಿಸಲು ಪಕ್ಷದ ಹೈಕಮಾಂಡ್ ಮುಂದಾಗಿದೆ.

Join Whatsapp