ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಕಾಂಗ್ರೆಸ್ ಮುಂದಾಗಿದ್ದು, ದೇಶಾದ್ಯಂತ ‘ದೇಶಕ್ಕಾಗಿ ದೇಣಿಗೆ’ ಎಂಬ ಹೆಸರಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಪಕ್ಷ ಘೋಷಿಸಿದೆ. ಡಿಸೆಂಬರ್ 18 ರಂದು ಅಭಿಯಾನ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಕನಿಷ್ಠ 138 ರೂ. ಅಥವಾ 1,380 ರೂ. 13,800 ಮತ್ತು ಹೀಗೆ ದೇಣಿಗೆ ನೀಡಬಹುದು ಎಂದರು. 1920-21ರಲ್ಲಿ ನೂರು ವರ್ಷಗಳ ಹಿಂದೆ ಪ್ರಾರಂಭವಾದ ಮಹಾತ್ಮ ಗಾಂಧಿಯವರ ಐತಿಹಾಸಿಕ ‘ತಿಲಕ್ ಸ್ವರಾಜ್ ನಿಧಿ’ಯಿಂದ ಈ ಕಾರ್ಯಕ್ರಮ ಪ್ರೇರಿತವಾಗಿದೆ ಎಂದೂ ಹೇಳಿದರು.
ಕ್ರೌಡ್ಫಂಡಿಂಗ್ ಅಭಿಯಾನಕ್ಕಾಗಿ ಪಕ್ಷವು ಎರಡು ಆನ್ಲೈನ್ ಚಾನಲ್‌ಗಳನ್ನು ರಚಿಸಿದ್ದು, donateinc.in ಪೋರ್ಟಲ್ ಮತ್ತು ಕಾಂಗ್ರೆಸ್ ಅಧಿಕೃತ ವೆಬ್ ಸೈಟ್ inc.in ನಲ್ಲಿ ದೇಣಿಗೆ ನೀಡಬಹುದು. ಡಿಸೆಂಬರ್ 18 ರಂದು ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಅವರು ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಲಿರುವ ಸಮಯದಲ್ಲಿ ದೇಣಿಗೆ ಲಿಂಕ್ ಲೈವ್ ಆಗಲಿದೆ ಎಂದು ವೇಣುಗೋಪಾಲ್ ಹೇಳಿದರು.
ಸಮಾನ ಸಂಪನ್ಮೂಲ ಹಂಚಿಕೆ ಮತ್ತು ಅವಕಾಶಗಳಿಂದ ಸಮೃದ್ಧವಾಗಿರುವ ಭಾರತವನ್ನು ರಚಿಸುವಲ್ಲಿ ಪಕ್ಷವನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.