►ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗ
ಆಲೂರು: ಆಲೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯೆ ತಾಹೇರಾಬೇಗಂ ಸರ್ವರ್ ಪಾಷಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜೆಡಿಎಸ್ ನ ಜಯಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಪಂಚಾಯಿತಿಯಲ್ಲಿ ಕೇವಲ ಒಂದು ಸ್ಥಾನ ಹೊಂದಿದ್ದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿಗೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ 11 ಸದಸ್ಯರಿದ್ದು, ಜೆಡಿಎಸ್ ನ ಒಬ್ಬ ಸದಸ್ಯರು ನಿಧನರಾಗಿದ್ದಾರೆ. ತಾಹೇರಾಬೇಗಂ ಕಾಂಗ್ರೆಸ್ ಪಕ್ಷದ ಏಕೈಕ ಸದಸ್ಯೆಯಾಗಿದ್ದಾರೆ. ಉಳಿದಂತೆ 4 ಜೆಡಿಎಸ್, 2 ಬಿಜೆಪಿ ಮತ್ತು 3 ಪಕ್ಷೇತರ ಸದಸ್ಯರು ಹಾಜರಾಗಿದ್ದರು. ಆದರೆ ಪಕ್ಷೇತರ ಸದಸ್ಯ ತೌಫಿಕ್ ತಟಸ್ಥವಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ತಾಹೇರಾಬೇಗಂ ಮತ್ತು 10ನೇ ವಾರ್ಡಿನ ಜೆಡಿಎಸ್ ಸದಸ್ಯೆ ಬಿ.ಪಿ. ರಾಣಿ ನಾಮಪತ್ರ ಸಲ್ಲಿಸಿದ್ದರು.
ತಾಹೇರಾಬೇಗಂ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಇಬ್ಬರು ಬಿಜೆಪಿ, ಇಬ್ಬರು ಪಕ್ಷೇತರರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ನ ಜಯಮ್ಮ ಸೇರಿದಂತೆ ಏಳು ಮತಗಳು ಲಭ್ಯವಾದವು. ಹೀಗಾಗಿ ತಾಹೀರಾ ಬೇಗಂ ಅಧ್ಯಕ್ಷರಾಗಿ ಆಯ್ಕೆಯಾದರು