ರವಿಕುಮಾರ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಧರಣಿ

Prasthutha|

ಬೆಂಗಳೂರು: ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂಬ ಸುಪ್ರೀಂ ಕೋರ್ಟಿನ ತೀರ್ಪಿದೆ. ಆದರೂ ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ವಿಧಾನ ಪರಿಷತ್’ನಲ್ಲಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪದ ಚರ್ಚೆಯಲ್ಲಿ ಹೇಳಿದರು.

- Advertisement -


ಮೀಸಲಾತಿ ಹೆಚ್ಚಳಕ್ಕೆ ಸಂಪೂರ್ಣ ಸಹಕಾರವಿದೆ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಚ್ಛೇದ 9ಕ್ಕೆ ಸೇರಿಸಬೇಕಿದೆ. ಆದರೆ, ಕೇಂದ್ರ ಸಚಿವರೊಬ್ಬರು ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿಸಲು ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ. ಕಾನೂನು ಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ವಿಫಲವಾಗಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಪತಿಗಳನ್ನು ಕೋರಿದರು.


ಆಗ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15-17ಕ್ಕೆ ಮತ್ತು ಪರಿಶಿಷ್ಟ ಪಂಗಡ ಶೇ.3-7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧದ ವಿಧೇಯಕ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ವಿಧೇಯಕದ ಚರ್ಚೆ ಸಂದರ್ಭದಲ್ಲಿ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ. ನಿಲುವಳಿ ಸೂಚನೆ ಅಗತ್ಯವಿಲ್ಲ. ರಾಜಕಾರಣ ಏನೇ ಇದ್ದರೂ ವಿರೋಧ ಪಕ್ಷಗಳು ಸಹಕಾರ ಕೊಡಬೇಕು ಎಂದರು.

- Advertisement -


ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಎರಡು ಬಾರಿ ಸರ್ವಪಕ್ಷ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಂಡು ಮೀಸಲಾತಿ ಹೆಚ್ಚಿಸಲಾಗಿದೆ. ಸಂವಿಧಾನ ತಿದ್ದುಪಡಿಗೆ ಮುನ್ನ ಆದೇಶ ಹೊರಡಿಸಬೇಕು ಎಂದು ವಿರೋಧ ಪಕ್ಷಗಳು ಸಲಹೆ ನೀಡಿದ್ದವು. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎದುರಾಗುವ ಕಾನೂನು ಬಿಕ್ಕಟ್ಟು ಸರ್ಕಾರಕ್ಕೆ ಬಿಟ್ಟದ್ದು, ಮೀಸಲಾತಿ ಹೆಚ್ಚಳಕ್ಕೆ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು. ಸಭಾಪತಿ ಅವರು ಮೀಸಲಾತಿ ಹೆಚ್ಚಳದ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿ ವಾಗ್ವಾದಕ್ಕೆ ತೆರೆ ಎಳೆದರು.


ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ, ಕುಲಪತಿ ನೇಮಕ ವಿಚಾರವಾಗಿ ಲಂಚ ನೀಡುವುದರ ಕುರಿತು ಲೋಕಸಭಾ ಸದಸ್ಯರೊಬ್ಬರು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಮಧ್ಯೆ ಪ್ರವೇಶಿಸಿ ಮಾತನಾಡಿದ ಕಾನೂನು ಸಚಿವ ಮಧುಸ್ವಾಮಿ, ಈ ಬಗ್ಗೆ ದಾಖಲೆ ನಿಮ್ಮ ಬಳಿ ದಾಖಲೆ ಇದ್ದರೆ ಸಲ್ಲಿಸಿ ಎಂದರು.


ಈ ಹಂತದಲ್ಲಿ ಸಭಾಪತಿ ಅವರು, ಪತಿಪಕ್ಷ ಸದಸ್ಯರು ಸಿಡಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ನೀಡಿದ್ದಾರೆ. ಇದನ್ನು ಪರಿಶೀಲನೆ ನಡೆಸಿದ ಬಳಿಕ ಚರ್ಚೆಗೆ ಅವಕಾಶ ನೀಡುವ ಕುರಿತು ತೀರ್ಮಾನ ಮಾಡಲಾಗುವುದು ಎಂದರು.


ಆಡಳಿತರೂಢ ಸದಸ್ಯ ರವಿಕುಮಾರ್ ಮಾತನಾಡಿ, ಪ್ರತಿಪಕ್ಷಗಳ ಆರೋಪಕ್ಕೆ ಅವಕಾಶ ನೀಡುವುದರಲ್ಲಿ ನಮಗೆ ತಕರಾರು ಇಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಸ್ವಪಕ್ಷದ ಭ್ರಷ್ಟಚಾರದ ಬಗ್ಗೆ ಹೇಳಿದ್ದಾರೆ ಎಂದಾಗ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರವಿಕುಮಾರ್ ಮಾಡಿದ ಆರೋಪ ಸಾಬೀತುಪಡಿಸಬೇಕು ಎಂದು ಪಟ್ಟುಹಿಡಿದು ಸಭಾಧ್ಯಕ್ಷರ ಪೀಠದ ಮುಂದಿನ ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರು. ಗದ್ದಲದ ನಡುವೆ ಸಭಾಪತಿ ಕಲಾಪವನ್ನು ಕೆಲಕಾಲ ಮುಂದೂಡಿದರು.
ಭೋಜನ ವಿರಾಮದ ಬಳಿಕ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ಸಿನ ಸದಸ್ಯರು ಸನದ ಬಾವಿಗಿಳಿದು ಧರಣಿ ಮುಂದುವರೆಸಿದರು.


ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರವಿಕುಮಾರ್ ಸದನಕ್ಕೆ ತಪ್ಪು ಮಾಹಿತಿ ರವಾನಿಸಿದ್ದಾರೆ. ಇದು ದೇಶವೇ ಗಮನಿಸಿದೆ. ಒಂದು ವೇಳೆ ಅವರ ಹೇಳಿಕೆ ಸತ್ಯವೇ ಆಗಿದ್ದಲ್ಲಿ, ನಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.


ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು ಸದನ ಗೊಂದಲಮಯವಾಯಿತು. ಸಭಾಪತಿ ಅವರು ಪದೇ ಪದೇ ಮನವಿ ಮಾಡಿದರು ಪ್ರಯೋಜನವಾಗದಿದ್ದಾಗ ಸದನವನ್ನು ಮತ್ತೆ ಕೆಲ ಕಾಲ ಮುಂದೂಡಿದರು.


ಮತ್ತೆ ಸದನ ಸಮಾವೇಶಗೊಂಡಾಗ ಸಭಾನಾಯಕರು ಆಕ್ಷೇಪಾರ್ಹ ಪದಗಳು ಬಳಕೆಯಾಗಿದ್ದರೆ, ಕಡತದಿಂದ ತೆಗೆಯುವಂತೆ ಸಭಾಪತಿ ಅವರಲ್ಲಿ ಮನವಿ ಮಾಡಿದರು. ಪಕ್ಷಭೇದ ಮರೆತು ಹಿರಿಯ ಸದಸ್ಯರು ಮಾತನಾಡಿ ಧರಣಿ ಕೈಬಿಟ್ಟು ಕಲಾಪಕ್ಕೆ ಸಹಕರಿಸುವಂತೆ ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದರು.


ಬಿಜೆಪಿಯ ಸದಸ್ಯ ರವಿಕುಮಾರ್ ತಾವು ಬಳಸಿದ ಆಕ್ಷೇಪಾರ್ಹ ಶಬ್ದವನ್ನು ವಾಪಸ್ಸು ಪಡೆದು ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದಾಗ ಕಾಂಗ್ರೆಸ್ ಸದಸ್ಯರು ಧರಣಿ ನಿಲ್ಲಿಸಿ ಸ್ವಸ್ಥಾನಗಳಿಗೆ ಮರಳಿದರು. ಸಭಾಪತಿ ಮುಂದಿನ ಕಲಾಪಕ್ಕೆ ಅನುವು ಮಾಡಿಕೊಟ್ಟರು.



Join Whatsapp