ಬೆಂಗಳೂರು: ಬೆಂಗಳೂರು ನಗರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಎದುರು ಸೋಲನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಮತ ಎಣಿಕೆ ನಡೆಯುತ್ತಿರುವಾಗಲೇ ಸೋಲಿನ ಸುಳಿವು ಹಿಡಿದು ಗಡಿಬಿಡಿಯಲ್ಲಿ ಆಟೊ ಹತ್ತಿ ಹೊರಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ 1227 ಮತ ಪಡೆದರೆ, ಕೆಜಿಎಫ್ ಬಾಬು 830 ಮತಗಳನ್ನು ಪಡೆದರು. ಈ ಕ್ಷೇತ್ರದಲ್ಲಿ 2057 ಮತಗಳು ಚಲಾವಣೆಗೊಂಡಿದ್ದವು. 13 ಮತಗಳು ತಿರಸ್ಕೃತಗೊಂಡಿದ್ದವು.
ಮತ ಎಣಿಕೆ ನಡೆಯುತ್ತಿರುವಾಗಲೇ ಸೋಲಿನ ಸುಳಿವು ಹಿಡಿದ ಭಾರಿ ಮೊತ್ತದ ಆಸ್ತಿಯ ಮೂಲಕವೇ ಪ್ರಚಾರ ಗಳಿಸಿದ್ದ ಕೆಜಿಎಫ್ ಬಾಬು ಎಣಿಕೆ ಕೇಂದ್ರದಿಂದ ತರಾತುರಿಯಲ್ಲಿ ಹೊರಗೆ ಬಂದು, ಬಂದಷ್ಟೇ ವೇಗದಲ್ಲಿ ಆಟೊ ಹತ್ತಿ ಹೊರಟಿರುವ ವೀಡಿಯೋ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಯೂಸುಫ್ ಷರೀಫ್(ಕೆಜಿಎಫ್ ಬಾಬು) ಅವರು ಚುನಾವಣಾ ಅಫಿಡವಿಟ್‌ನಲ್ಲಿ ₹1743 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ತಾವು ಪ್ರತಿನಿಧಿಸುವ ಬೆಂಗಳೂರು ನಗರ ಕ್ಷೇತ್ರಕ್ಕೆ ₹500 ಕೋಟಿ ನೀಡುವುದಾಗಿ ಬಾಬು ಚುನಾವಣೆ ಪ್ರಚಾರದ ವೇಳೆ ಹೇಳಿದ್ದರು.