ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ನೇಮಿಸಬೇಕು ಎಂಬ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಸಂಸದರು ಭಾಗವಹಿಸಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮನೀಶ್ ತಿವಾರಿ, ಡಿಕೆ ಶಿವಕುಮಾರ್, ರೇವಂತ್ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಬಾರಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂಬುದು ಬಹುತೇಕ ಸಂಸದರ ಆಪೇಕ್ಷೆಯಾಗಿತ್ತು. ಹೀಗಾಗಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ರಾಹುಲ್ ಗಾಂಧಿ ವಿಪಕ್ಷ ನಾಯಕನಾಗುವುದು 140 ಕೋಟಿ ಭಾರತೀಯರ ಬೇಡಿಕೆಯಾಗಿದೆ ಎಂದಿದ್ದಾರೆ.
ಗುರುದಾಸ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಸಂಸದ ಸುಖ್‌ಜಿಂದರ್ ಸಿಂಗ್ ರಾಂಧವಾ ಅವರು, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರಧಾನಿಗೆ ಪ್ರತ್ಯುತ್ತರ ನೀಡಬಲ್ಲವರು. ಆದ್ದರಿಂದ ಅವರು ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾಗಲು, ಅತಿದೊಡ್ಡ ವಿರೋಧ ಪಕ್ಷ ಒಟ್ಟು ಸ್ಥಾನಗಳಲ್ಲಿ ಕನಿಷ್ಠ 10% ಅಂದರೆ 55% ಸ್ಥಾನಗಳನ್ನು ಹೊಂದಿರಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆದ್ದಿದ್ದು, ಅತಿದೊಡ್ಡ ವಿರೋಧ ಪಕ್ಷವಾಗಿದೆ. ಪಕ್ಷದ ನಾಯಕನಿಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗಲಿದೆ.
ಅಲ್ಲದೆ, ಕಾಂಗ್ರೆಸ್ ಸಂಸದೀಯ ಪಕ್ಷದ(ಸಿಪಿಪಿ) ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಪುನರಾಯ್ಕೆಯಾಗಿದ್ದಾರೆ. ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದ್ದಾರೆ.