ಬೆಲೆ ಏರಿಕೆ ವಿರೋಧಿಸಿ ವಿಧಾನಸೌಧಕ್ಕೆ ಎತ್ತಿನ ಬಂಡಿಯಲ್ಲಿ ಬಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ಅಗತ್ಯ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋಮವಾರ ಎತ್ತಿನ ಬಂಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭಗೊಂಡಿದೆ.

- Advertisement -

ಸರ್ಕಾರದ ನೀತಿಯನ್ನು ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ಎತ್ತಿನಬಂಡಿಯಲ್ಲಿ ಬಂದಿರುವುದಾಗಿ ಉಭಯ ನಾಯಕರು ತಿಳಿಸಿದರು. ಇಬ್ಬರು ನಾಯಕರು ಬೆಳಗ್ಗೆ ತಮ್ಮ ನಿವಾಸಗಳಿಂದ ಎತ್ತಿನ ಬಂಡಿ ಏರಿ ವಿಧಾನಸೌಧದ ಕಡೆಗೆ ತೆರಳಿದರು. ಪಕ್ಷದ ನೂರಾರು ಕಾರ್ಯಕರ್ತರು ಅವರನ್ನು ಹಿಂಬಾಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್ನ ಹಲವು ಶಾಸಕರು ಕೂಡ ಎತ್ತಿನ ಬಂಡಿಯಲ್ಲೇ ವಿಧಾನಸೌಧದತ್ತ ಆಗಮಿಸಿದರು.

- Advertisement -


ಸಿದ್ದರಾಮಯ್ಯ ಸ್ವತಃ ಎತ್ತಿನ ಬಂಡಿಯನ್ನು ಚಲಾಯಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್. ಪಾಟೀಲ, ಶಾಸಕ ಎಂ.ಬಿ. ಪಾಟೀಲ ಜತೆಗಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಿಂದ ಎತ್ತಿನ ಬಂಡಿಯಲ್ಲಿ ಹೊರಡುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ʼಬಿಜೆಪಿ ಸರ್ಕಾರ ದೇಶದ ಜನರ ಪಿಕ್ ಪಾಕೆಟ್ ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್, ಅಡುಗೆ ಅನಿಲದ ಬೆಲೆ ಇಳಿಸಬೇಕು. ಸದನದಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುವುದು ಎಂದರು.

ಎತ್ತಿನಗಾಡಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಗಾಡಿಯನ್ನು ತಡೆದರು. ಇದರಿಂದ ಗರಂ ಆದ ಸಿದ್ದರಾಮಯ್ಯ ಪೊಲೀಸರ ವಿರುದ್ಧ ಹರಿಹಾಯ್ದರು. ಬಳಿಕ ಪೊಲೀಸರು ಗಾಡಿಯನ್ನು ವಿಧಾನಸೌಧದ ಆವರಣದೊಳಗೆ ಹೋಗಲು ಅನುಮತಿಸಿದರು.

Join Whatsapp