ಸಿದ್ದು ನಿಜ ಕನಸುಗಳು ಕೃತಿ ವಿರೋಧಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ, ಬಂಧನ

Prasthutha|


ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ “ಸಿದ್ದು ನಿಜ ಕನಸುಗಳು” ಎಂಬ ಕೃತಿಯನ್ನು ಬಿಜೆಪಿ ಹೊರತಂದಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

- Advertisement -


ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿ, ಸಿಎಂ ನಿವಾಸಕ್ಕೆ ಮುತ್ತಿಗೆಗೆ ತೆರಳಿದರು. ಈ ವೇಳೆ ಮಾರ್ಗ ಮಧ್ಯೆ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.


ಇದಕ್ಕೂ ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿ ಪಕ್ಷ ಹಾಗೂ ಸರ್ಕಾರದಿಂದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ನಡೆಸಲು ಸುಳ್ಳು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಾಲಯ ಈಗ ಅದಕ್ಕೆ ತಡೆಯಾಜ್ಞೆ ನೀಡಿದೆ. ಆದರೆ ಬಿಜೆಪಿ 40% ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾವು ಈಗಾಗಲೇ ಅನೇಕ ರೀತಿಯ ಕಿರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಗಂಗೋತ್ರಿ ಬಗ್ಗೆ ಈಗ ಜನರೇ ನಿತ್ಯವೂ ಮಾಧ್ಯಮಗಳಲ್ಲಿ ಕಣ್ಣಾರೆ ಕಾಣುತ್ತಿದ್ದಾರೆ ಎಂದು ಹೇಳಿದರು.

- Advertisement -


ಬಿಜೆಪಿ ಪಕ್ಷದ ಹೆಸರು ಈಗ ಬದಲಾಗಿದೆ. ಬಿಜೆಪಿ ಎಂದರೆ ಬುರುಡೆ ಜನರ ಪಕ್ಷ ಎಂದು ಈಗ ಕುಖ್ಯಾತಿ ಗಳಿಸಿದೆ. ಸಿದ್ದರಾಮಯ್ಯನವರು ಜನ ನಾಯಕರು ಅವರು ನೀಡಿದ ಕೊಡುಗೆ ಕರ್ನಾಟಕಕ್ಕೆ ಮತ್ತು ದೇಶಕ್ಕೆ ಮಾದರಿಯಾಗಿದೆ. ಅವರ ವಿರುದ್ಧ ಅಪಪ್ರಚಾರ ನಡೆಸುವ ಬಿಜೆಪಿಯವರು ಮೊದಲು ಅವರ ಮೂಲಸ್ಥಾನದ ಬಗ್ಗೆ ಅರಿತುಕೊಳ್ಳುವುದು ಒಳಿತು ಎಂದು ತಿರುಗೇಟು ನೀಡಿದರು.


ಬಿಜೆಪಿ ಸರ್ಕಾರ ಜನ ವಿರೋಧಿ ಸರ್ಕಾರ ಎಂದು ಸಾಬೀತಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವುದು ಖಚಿತವಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಶಾಸಕರಾದ ಬೈರತಿ ಸುರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಬೆಂಗಳೂರು ನಗರ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿ ಜನಾರ್ದನ್, ಎ. ಆನಂದ್,ಎಲ್. ಜಯಸಿಂಹ ಹಾಗೂ ಪಕ್ಷದ ಮುಖಂಡರಾದ ರಘುನಾಥ್ ನಾಯ್ಡು, ವಾಸುದೇವ ರೆಡ್ಡಿ, ಲಿಂಗರಾಜು, ಶರವಣ ರಾಮಕೃಷ್ಣ, ಬಿ ಮಂಜುನಾಥ್, ಪ್ರಕಾಶ್, ಪುಟ್ಟರಾಜು, ವೆಂಕಟೇಶ್, ನವೀನ್, ಪ್ರಶಾಂತ್, ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು.



Join Whatsapp